ಕೋಲಾರ:ಸಚಿವ ಮುನಿರತ್ನ ಅವರಿಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲುನಾಯ್ಕರ್ ಎಂಬವರನ್ನು ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಎಂದು ಘೋಷಿಸಿ ಇಂದು ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಈಗಾಗಲೇ ಕೆಜಿಎಫ್ ಕ್ಷೇತ್ರದಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಮೋಹನ್ ಕೃಷ್ಣ ನಡುವೆ ಟಿಕೆಟ್ ಫೈಟ್ ಏರ್ಪಟ್ಟಿದ್ದು, ಈ ನಡುವೆ ಸಚಿವರ ನಡೆ ಅಚ್ಚರಿ ಮೂಡಿಸಿದೆ.
ಉಸ್ತುವಾರಿ ಸಚಿವ ಮುನಿರತ್ನ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲುನಾಯ್ಕರ್ ಅವರನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಘೋಷಣೆ ಮಾಡಿ ಕೆಜಿಎಫ್‌ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ''ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುವ ನಿಟ್ಟಿನಲ್ಲಿ ಹೊಸ ಆಕಾಂಕ್ಷಿ ಅಭ್ಯರ್ಥಿಯನ್ನು ಇಲ್ಲಿ ಪರಿಚಯ ಮಾಡಿದ್ದೇನೆ. ಇಲ್ಲಿರುವ ಗುಂಪುಗಾರಿಕೆ ನನಗೂ ಗೊತ್ತಿದೆ" ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವೇಲುನಾಯ್ಕರ್, ‘‘ಕಾಲೇಜಿನಲ್ಲಿರುವಾಗಲೇ ರಾಜಕೀಯ ಜೀವನ ಆರಂಭಿಸಿದ್ದ ನಾನು ನನ್ನ ಕೆಲಸ, ಶ್ರಮ ಗುರುತಿಸಿ ಸಚಿವ ಮುನಿರತ್ನ ಅವರು ಅವರ ಕ್ಷೇತ್ರದಲ್ಲಿ ಕಾರ್ಪೋರೇಶನ್ ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟರು. ಅಲ್ಲಿಂದ ಇಲ್ಲಿಯವರೆಗೂ ಬಿಜೆಪಿ ಪಕ್ಷದ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಕೋಲಾರದ ಕೆಜಿಎಫ್ ಕ್ಷೇತ್ರಕ್ಕೂ ನನಗೂ ಹಳೆಯ ಸಂಬಂಧ ಇದೆ, ಬಿಜೆಪಿ ಪಕ್ಷ ಕಾರ್ಯಕರ್ತರನ್ನು ಗುರುತಿಸುವ ಪಕ್ಷ, ಮುಖಂಡರು ಸೂಚನೆಯಂತೆ ನಾನು ಸಹ ಕೆಜಿಎಫ್ನಲ್ಲಿ ಆಕಾಂಕ್ಷಿಯಾಗಿದ್ದು, ಅಭ್ಯರ್ಥಿಯಲ್ಲ ಎಂದು ಹೇಳಿದರು.