ಕೋಲಾರ:ಮಾಲೂರು ಕೈ ಶಾಸಕ ಕೆ.ವೈ ನಂಜೇಗೌಡ ಹಾಗೂ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ನಡುವಿನ ಪ್ರತಿಷ್ಠೆಗೆ ಕಾರಣವಾಗಿದ್ದ ಮಾಲೂರು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಕೊನೆಗೂ ಕಾಂಗ್ರೆಸ್ ಯಶಸ್ವಿಯಾಗಿದೆ.
27 ಸದ್ಯ ಬಲ ಹೊಂದಿರುವ ಮಾಲೂರು ಪುರಸಭೆಯಲ್ಲಿ ಕಾಂಗ್ರೆಸ್ ಪರ ಶಾಸಕರು ಸೇರಿ 15 ಸದಸ್ಯ ಬಲ ಪಡೆದು ಕಾಂಗ್ರೆಸ್ನ ಮುರಳೀಧರ್ ಅಧ್ಯಕ್ಷರಾಗಿ, ಹಾಗೂ ಉಪಾಧ್ಯಕ್ಷರಾಗಿ ಭಾರತಮ್ಮ ಶಂಕರಪ್ಪ ಅಧಿಕಾರ ಹಿಡಿದಿದ್ದಾರೆ.
ಕೋಲಾರ ಪುರಸಭೆ ಚುನಾವಣೆ ಫಲಿತಾಂಶ ಪ್ರಕಟ ಬಿಜೆಪಿ ಪರ ಸಂಸದ ಸೇರಿ 13 ಸದಸ್ಯರಿದ್ದರು ಈ ಪೈಕಿ ಬಿಜೆಪಿಯ 12ನೇ ವಾರ್ಡ್ ಸದಸ್ಯೆ ಗೈರು ಹಾಜರಾಗುವ ಮೂಲಕ ಬಿಜೆಪಿಗೆ ಶಾಕ್ ಕೊಟ್ಟರೆ, ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಬಿಜೆಪಿ ಸಂಪರ್ಕದಲ್ಲಿದ್ದು ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದಾರೆ. ಪರಿಣಾಮ ಹದಿನೈದು ವರ್ಷಗಳ ಕಾಲ ನಿರಂತರವಾಗಿ ಪುರಸಭೆ ಆಡಳಿತ ಹಿಡಿದುಕೊಂಡು ಬಂದಿದ್ದ ಬಿಜೆಪಿ ಇಂದು ಅಧಿಕಾರ ಕಳೆದುಕೊಂಡು ಮುಖಭಂಗ ಅನುಭವಿಸಿದೆ.
ಇದೇ ವೇಳೆ ಮಾತನಾಡಿದ ಬಿಜೆಪಿ ಸಂಸದ ಮುನಿಸ್ವಾಮಿ, ಕಾಂಗ್ರೆಸ್ ವಾಮ ಮಾರ್ಗದಿಂದ ಬಿಜೆಪಿ ಸದಸ್ಯರನ್ನು ಕುದುರೆ ವ್ಯಾಪಾರ ಮಾಡಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಇದು ಹೆಚ್ಚುದಿನ ಇರೋದಿಲ್ಲ ಎಂದು ಆರೋಪಿಸಿದರು.
ಇನ್ನು ಶತಾಯಗತಾಯ ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕೆಂಬ ನಿರ್ಧಾರ ಮಾಡಿದ್ದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಕಳೆದ ಇಪ್ಪತೈದು ದಿನಗಳಿಂದ ಅಂದ್ರೆ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಸದಸ್ಯರನ್ನು ಕರೆದೊಯ್ದು ಮಂಗಳೂರು ಬಳಿ ರೆಸಾರ್ಟ್ನಲ್ಲಿರಿಸಿದ್ದರು. ಪರಿಣಾಮ ಬಿಜೆಪಿ ಪಕ್ಷಕ್ಕೆ ಪಕ್ಷೇತರ ಸದಸ್ಯರು ಸೇರಿ ಯಾರೊಬ್ಬರು ಸಂಪರ್ಕಕ್ಕೆ ಸಿಗದಂತೆ ನೋಡಿಕೊಂಡಿತ್ತು. ಅಷ್ಟೇ ಅಲ್ಲಾ ಬಿಜೆಪಿಯ 12ನೇ ವಾರ್ಡ್ನ ಸದಸ್ಯೆ ಕೂಡಾ ಬಿಜೆಪಿಯವರ ಸಂಪರ್ಕಕ್ಕೆ ಸಿಗದಂತೆ ಕಾಂಗ್ರೆಸ್ ನಾಯಕರು ನೋಡಿಕೊಂಡಿದ್ದರ ಪರಿಣಾಮ ಇಂದು ಕಾಂಗ್ರೆಸ್ ಹದಿನೈದು ವರ್ಷಗಳ ನಂತರ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿದು ಸಂಭ್ರಮಿಸಿದೆ.