ಕರ್ನಾಟಕ

karnataka

ETV Bharat / state

ಕೋಲಾರ: ಗ್ರಾಹಕರಿಗೆ ಗುಡ್​ ನ್ಯೂಸ್, ಟೊಮೆಟೊ ಬೆಲೆ ಕುಸಿತ.. - ಎಪಿಎಂಸಿ ಮಾರುಕಟ್ಟೆ

Tomato Price : ಎಲ್ಲೆಡೆ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆಯಾ ಸ್ಥಳೀಯ ಮಾರುಕಟ್ಟೆಗೆ ಟೊಮೆಟೊ ಬರಲಾರಂಭಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೂರೈಕೆ ಹೆಚ್ಚಾಗುತ್ತಿದ್ದಂತೆ ಬೇಡಿಕೆಯೂ ಕಡಿಮೆಯಾಗುತ್ತಿದೆ. ಇದರಿಂದ ಟೊಮೆಟೊ ಬೆಲೆ ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಾರೆ ವ್ಯಾಪಾರಸ್ಥರು.

tomato prices fall
ಕೋಲಾರ: ಗ್ರಾಹಕರಿಗೆ ಗುಡ್​ ನ್ಯೂಸ್, ಟೊಮೆಟೊ ಬೆಲೆ ಕುಸಿತ

By

Published : Aug 9, 2023, 5:05 PM IST

ಕೋಲಾರ: ಗ್ರಾಹಕರಿಗೆ ಗುಡ್​ ನ್ಯೂಸ್, ಟೊಮೆಟೊ ಬೆಲೆ ಕುಸಿತ

ಕೋಲಾರ:ಜೂನ್​ ತಿಂಗಳಿಂದ ನಿರಂತವಾಗಿ ಏರಿಕೆ ಕಂಡಿದ್ದ ಟೊಮೆಟೊ ಬೆಲೆಯು ಸದ್ಯ ಇಳಿಕೆಯಾಗುತ್ತಿದೆ. ಎರಡು ತಿಂಗಳಲ್ಲಿ 15 ಕೆಜಿ ಬಾಕ್ಸ್​ ಟೊಮೆಟೊಗೆ 2,700 ರೂ. ವರೆಗೆ ಹೆಚ್ಚಳವಾಗಿತ್ತು. ಈಗ ಅಷ್ಟೇ ವೇಗವಾಗಿ ಟೊಮೆಟೊ ಬೆಲೆ ಇಳಿಕೆ ಕಂಡಿದೆ.

ಕೆಂಪು ಸುಂದರಿ ಕಿಚನ್​ ಕ್ವೀನ್​ ಅಂತೆಲ್ಲಾ ಕರೆಯಿಸಿಕೊಳ್ಳುತ್ತಿರುವ ಟೊಮೆಟೊ ಬೆಲೆ ಕಳೆದ ಎರಡು ತಿಂಗಳಿಂದ ನಿರಂತವಾಗಿ ಏರಿಕೆಯಾಗಿ ರೈತರಿಗೆ ವರದಾನವಾಗಿತ್ತು. ಅಲ್ಲದೆ, ಗ್ರಾಹಕರಿಗೆ ಹೊರೆಯಾಗುವ ಮೂಲಕ ಇಡೀ ದೇಶದಲ್ಲೇ ಸದ್ದು ಮಾಡಿತ್ತು. ಆದ್ರೆ ಕಳೆದ ಒಂದು ವಾರದಿಂದ ಅಷ್ಟೇ ವೇಗವಾಗಿ ಬೆಲೆ ಕುಸಿಯುಲು ಪ್ರಾರಂಭವಾಗಿದೆ. ಇಂದು ಬಾಕ್ಸ್ ಟೊಮೆಟೊ ದರ ಕೇವಲ 1000 ರಿಂದ 1200 ರೂಪಾಯಿಗೆ ಮಾರಾಟವಾಗಿದೆ. ಅಂದರೆ, ಈ ಹಿಂದೆ 160-180 ರೂಪಾಯಿ ಬೆಲೆ ಇದ್ದ ಕೆಜಿ ಟೊಮೆಟೊ ಈಗ 60 ರಿಂದ 80 ರೂಪಾಯಿಗೆ ಮಾರಾಟ ಆಗುತ್ತಿದೆ.

ಹೊರರಾಜ್ಯ, ವಿದೇಶಕ್ಕೆ ಟೊಮೆಟೊ ರಫ್ತು:ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಉತ್ತರ ಭಾರತದ ರಾಜ್ಯಗಳಿಗೆ ಮತ್ತು ಅಂಡಮಾನ್​- ನಿಕೋಬಾರ್​ ಹಾಗೂ ಹೊರ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ, ದುಬೈಗೂ ಇಲ್ಲಿನ ಟೊಮೆಟೊ ರಫ್ತಾಗುತ್ತದೆ. ಆದರೆ, ಸದ್ಯ ಉತ್ತರ ಭಾರತದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಟೊಮೆಟೊ ಅಲ್ಲಿನ ಮಾರುಕಟ್ಟೆಗೆ ಬರಲಾರಂಭಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೂರೈಕೆ ಹೆಚ್ಚಾಗುತ್ತಿದ್ದಂತೆ ಬೇಡಿಕೆಯೂ ಕಡಿಮೆಯಾಗುತ್ತಿದೆ. ಇದರಿಂದ ಟೊಮೆಟೊ ಬೆಲೆ ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆ ಹೆಚ್ಚಿದೆ.

ಮಾರುಕಟ್ಟೆ ಮಾಹಿತಿ ಪ್ರಕಾರ, ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಮೊದಲಿಗಿಂತಲೂ ಈಗ ಹೆಚ್ಚಿನ ಟೊಮೆಟೊ ಪೂರೈಕೆಯಾಗುತ್ತಿದೆ. ಕೋಲಾರ ಚಿಕ್ಕಬಳ್ಳಾಪುರದ ಅಷ್ಟೇ ಅಲ್ಲದೆ, ಚಿತ್ರದುರ್ಗ, ಚಳ್ಳಕೆರೆ, ತುಮಕೂರು, ದಾವಣಗೆರೆ, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ರೈತರು ಬೆಳೆದ ಟೊಮೆಟೊವನ್ನು ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಜೊತೆಗೆ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಗಡಿಯ ರೈತರು ಕೂಡಾ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ತಾವು ಬೆಳೆದ ಟೊಮೆಟೊ ತಂದು ಮಾರಾಟ ಮಾಡುತ್ತಿದ್ದಾರೆ.

ಮಳೆ ಕಡಿಮೆಯಾದ ಹಿನ್ನೆಲೆ ಟೊಮೆಟೊ ಬೆಳೆದ ರೈತರು:ಅಲ್ಲದೇ, ಹೊರ ರಾಜ್ಯಗಳು ಹಾಗೂ ಉತ್ತರ ಭಾರತದಲ್ಲೂ ಮಳೆ ಕಡಿಮೆಯಾಗಿದೆ. ಆ ಭಾಗದಲ್ಲೂ ಟೊಮೆಟೊ ಬೆಳೆ ರೈತರ ಕೈಹಿಡಿದಿದೆ. ಅಲ್ಲಿನ ಸ್ಥಳೀಯ ಮಾರುಕಟ್ಟೆಗಳಿಗೂ ಟೊಮೆಟೊ ಆವಕವಾಗುತ್ತಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಹೊರ ರಾಜ್ಯಗಳಿಂದ ಬೇಡಿಕೆ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ರಾಜ್ಯದ ಹೊರ ಜಿಲ್ಲೆಗಳಿಂದ ಪೂರೈಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಮುಂದಿನ 10 ರಿಂದ 15 ದಿನಗಳಲ್ಲಿ ಟೊಮೆಟೊ ಬೆಲೆ ತೀವ್ರವಾಗಿ ಕುಸಿತ ಕಂಡು, ಬೆಲೆ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಕಳೆದೆರಡು ತಿಂಗಳಿಂದ ಪ್ರತಿಯೊಂದು ಮನೆ ಹಾಗೂ ಮಾರುಕಟ್ಟೆಗಳಲ್ಲಿ ಭಾರಿ ಸದ್ದು ಮಾಡಿದ್ದ ಟೊಮೆಟೊ ಬೆಲೆ ಇನ್ಮುಂದೆ ಸದ್ದಿಲ್ಲದೆ ಸೈಲೆಂಟ್​ ಆಗಲಿದೆ. ಒಂದೆರಡು ವಾರಗಳಲ್ಲಿ ಮತ್ತಷ್ಟು ಟೊಮೆಟೊ ಬೆಲೆ ಇಳಿಕೆಯಾಗಲಿದ್ದು, ಇದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಲಿದೆ.

ಇದನ್ನೂ ಓದಿ:ಸರ್ಕಾರಿ ನೌಕರಿ ಸಿಗದೇ ಕೃಷಿಯತ್ತ ಮುಖಮಾಡಿದ ಯುವಕ: 30 ಗುಂಟೆಯಲ್ಲಿ ಟೊಮೆಟೊ ಬೆಳೆದು ಲಕ್ಷಾಧೀಶನಾದ ರೈತ

ABOUT THE AUTHOR

...view details