ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ ಜೊತೆ ಕೋಲಾರದ ರೈತ ವಿಡಿಯೋ ಸಂವಾದ!

ಬಿಎ ಪದವಿ ಪಡೆದಿರುವ ಇವರು ಸದ್ಯ ವ್ಯವಸಾಯ ಉತ್ಪನ್ನ ಸೇವಾ ಸಹಕಾರಿ ಸಂಘ ಹುಣಸನಹಳ್ಳಿ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಾದರಿ ಕೃಷಿಕನಾಗಿ, ತಾನು ಸರ್ಕಾರದ ಸವಲತ್ತು ಬಳಸಿಕೊಳ್ಳುವ ಜೊತೆಗೆ ಸ್ಥಳೀಯ ರೈತರಿಗೂ ಸರ್ಕಾರದ ಯೋಜನೆಗಳನ್ನು ತಿಳಿಸಿಕೊಡುವ ಕೆಲಸ ಮಾಡುತ್ತಾರೆ. ಹೀಗಾಗಿ ಪಿಎಂ ಮೋದಿ ಜೊತೆಗಿನ ಸಂವಾದ ಸಾಕಷ್ಟು ಮಹತ್ವದ್ದಾಗಿದೆ..

kolar
ಮೋದಿ ಜೊತೆ ಕೋಲಾರದ ರೈತ ಸಂವಾದ

By

Published : Dec 25, 2020, 7:57 AM IST

Updated : Dec 25, 2020, 8:59 AM IST

ಕೋಲಾರ :ಬಯಲು ಸೀಮೆಯಲ್ಲಿ ಬೆವರು ಹರಿಸಿ ದುಡಿಯುತ್ತಿರುವ ರೈತನೋರ್ವ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಮೋದಿ ಜೊತೆಗಿನ ಸಂವಾದಕ್ಕೆ ಕೋಲಾರದ ರೈತ..

ಮಾಜಿ ಪ್ರಧಾನಿ ದಿ. ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ದೇಶದ ರೈತರ ಜೊತೆ ವಿಡಿಯೋ ಸಂವಾದ ಮಾಡಲಿದ್ದು, ದೇಶದ ಮೂಲೆ ಮೂಲೆಯಲ್ಲಿನ ಅನ್ನದಾತರ ಸಮಸ್ಯೆಗಳನ್ನು ಆಲಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ಬರದ ನಾಡು ಎಂದು ಕರೆಯಲಾಗುವ, ನದಿ-ನಾಲೆಗಳಿಲ್ಲದ ಕೋಲಾರ ಜಿಲ್ಲೆಯ ರೈತನೊಬ್ಬ ರಾಜ್ಯದ ಪರವಾಗಿ ಮೋದಿ ಜೊತೆ ಮಾತನಾಡಲು ಆಯ್ಕೆಯಾಗಿದ್ದಾರೆ. ಅವರೇ ಬಂಗಾರಪೇಟೆ ತಾಲೂಕು ಜುಂಜನಹಳ್ಳಿ ಗ್ರಾಮದ ರೈತ ಚಂದ್ರಪ್ಪ.

ಮೂಲತ: ಕೃಷಿಕ ಕುಟುಂಬದವರಾದ ಚಂದ್ರಪ್ಪ ಅವರಿಗೆ, ಹತ್ತು ಎಕರೆ ಕೃಷಿ ಭೂಮಿ ಇದೆ. ಅದರಲ್ಲಿ ಇವರು ಟೊಮ್ಯಾಟೊ, ಆಲೂಗಡ್ಡೆ, ಅವರೆಕಾಯಿ, ಕ್ಯಾಪ್ಸಿಕಂ ಸೇರಿ ಹಲವು ಬೆಳೆಗಳನ್ನು ಬೆಳೆಯುತ್ತಾರೆ. ಬೋರ್​ವೆಲ್​ ಹಾಗೂ ಕೃಷಿ ಹೊಂಡದ ಜೊತೆಗೆ ಕೇಂದ್ರ ಸರ್ಕಾರದ ಕೃಷಿ ಸನ್ಮಾನ್​ ಯೋಜನೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲ, ವಾರ್ಷಿಕ ₹25 ರಿಂದ ₹30 ಲಕ್ಷ ಆದಾಯ ಗಳಿಸುವ ಮೂಲಕ ಉತ್ತಮ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಇವರನ್ನು ನಬಾರ್ಡ್​ನ ಅಧಿಕಾರಿಗಳು ಗುರುತಿಸಿ ಮೋದಿ ವಿಡಿಯೋ ಸಂವಾದಕ್ಕೆ ರಾಜ್ಯದಿಂದ ಆಯ್ಕೆ ಮಾಡಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ರೈತ ಚಂದ್ರಪ್ಪ, ಇದು ನನ್ನ ಜೀವನದಲ್ಲಿ ಸಿಕ್ಕಿರುವ ಭಾಗ್ಯ ಎನ್ನುತ್ತಿದ್ದಾರೆ.

ಬಿಎ ಪದವಿ ಪಡೆದಿರುವ ಇವರು ಸದ್ಯ ವ್ಯವಸಾಯ ಉತ್ಪನ್ನ ಸೇವಾ ಸಹಕಾರಿ ಸಂಘ ಹುಣಸನಹಳ್ಳಿ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಾದರಿ ಕೃಷಿಕನಾಗಿ, ತಾನು ಸರ್ಕಾರದ ಸವಲತ್ತು ಬಳಸಿಕೊಳ್ಳುವ ಜೊತೆಗೆ ಸ್ಥಳೀಯ ರೈತರಿಗೂ ಸರ್ಕಾರದ ಯೋಜನೆಗಳನ್ನು ತಿಳಿಸಿಕೊಡುವ ಕೆಲಸ ಮಾಡುತ್ತಾರೆ. ಹೀಗಾಗಿ ಪಿಎಂ ಮೋದಿ ಜೊತೆಗಿನ ಸಂವಾದ ಸಾಕಷ್ಟು ಮಹತ್ವದ್ದಾಗಿದೆ.

ಪ್ರಧಾನಮಂತ್ರಿಗೆ ಕೋಲಾರ ಜಿಲ್ಲೆಯ ರೈತರ ನೀರಿನ ಸಮಸ್ಯೆಗಳನ್ನು ತಿಳಿಸಿ, ನದಿ ಜೋಡಣೆಯಂತ ಯೋಜನೆಗಳನ್ನು ಜಾರಿಗೆ ತರಲು ಮನವಿ ಮಾಡುವ ಇಂಗಿತ ಇವರದ್ದಾಗಿದೆ. ಜೊತೆಗೆ ರಾಜ್ಯದ ರೈತರ ಸಮಸ್ಯೆ ಜೊತೆಗೆ ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿರುವ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗಳ ಮರು ಪರಿಶೀಲನೆಗೂ ಮನವಿ ಮಾಡಲಿದ್ದಾರೆ ರೈತ ಚಂದ್ರಪ್ಪ.

Last Updated : Dec 25, 2020, 8:59 AM IST

ABOUT THE AUTHOR

...view details