ಕೋಲಾರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಎದ್ದಿರುವ ಮಾಂಡೌಸ್ ಚಂಡಮಾರುತದ ಪ್ರಭಾವ ಕರಾವಳಿ ಭಾಗದ ಜೊತೆಗೆ ಉತ್ತರ ಕರ್ನಾಟದ ಜಿಲ್ಲೆಗಳ ಮೇಲೂ ಬೀರಿದೆ. ಪರಿಣಾಮ ಕೋಲಾರ ಜಿಲ್ಲೆಯ ಜನರು ಶೀತಗಾಳಿ ಹಾಗೂ ಮಳೆಗೆ ತತ್ತರಿಸಿ ಹೋಗಿದ್ದಾರೆ. ಶೀತ ಗಾಳಿಗೆ ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದ್ದು, ಜನರು ಮನೆಯಲ್ಲಿ ಬೆಚ್ಚನೆ ಸ್ವೆಟರ್ ಹಾಗೂ ಟೋಪಿಗಳ ಮೊರೆ ಹೋಗಿದ್ದಾರೆ.
ಇನ್ನು ಬೆಂಬಿಡದೆ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯಿಂದ ಕಟಾವಿಗೆ ಬಂದಿದ್ದ ರಾಗಿ ಹಾಗೂ ದ್ವಿದಳ ದಾನ್ಯಗಳ ಬೆಳೆಗಳು ನೆಲಕಚ್ಚಿವೆ. ರಾಗಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ಕಟಾವಿಗೆ ಬಂದಿದ್ದ ರಾಗಿ ಮಳೆಗೆ ನೆನೆದು ಮೊಳಕೆಯೊಡೆಯುವಂತಾಗಿದೆ. ದ್ವಿದಳ ದಾನ್ಯಗಳಾದ ಅವರೆ, ತೊಗರಿ ಬೆಳೆಗಳು, ಅವರೆ ಹೂವು ನೆಲಕ್ಕುದುರುತ್ತಿವೆ. ಮಳೆಯ ಅಬ್ಬರಕ್ಕೆ ರೈತರು ವಾರ್ಷಿಕ ಬೆಳೆಗಳಲ್ಲೂ ನಷ್ಟ ಅನುಭವಿಸುವಂತಾಗಿದೆ.
ಸತತವಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಟೊಮೆಟೊ ಬೆಳೆ ನಾಶವಾಗಿದ್ದು, ತೇವಾಂಶ ಹೆಚ್ಚಾಗಿ ಬೆಳೆಗೆ ಹೂಜಿ ಮತ್ತು ಕೀಟಬಾಧೆ ಅಂಟಿಕೊಂಡಿವೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ ರೈತರು, ಟೊಮೆಟೊ ಬೆಳೆ ನಾಶದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಗಿಡದಲ್ಲಿರುವ ಟೊಮೆಟೊ ಹಣ್ಣು ಕೀಳಲು ಆಗದೆ ತೋಟದಲ್ಲಿ ಬಿಟ್ಟಿದ್ದು, ಸರ್ಕಾರ ತಮ್ಮ ನೆರವಿಗೆ ಬರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.