ಕೋಲಾರ: ರಾಸುಗಳ ಓಟದ ವೇಳೆ ಡಿವೈಎಸ್ಪಿ, ರಾಸುಗಳಿಗೆ ಕಟ್ಟಲಾಗಿದ್ದ ಹಗ್ಗಕ್ಕೆ ಸಿಲುಕಿ ಕೆಳಕ್ಕೆ ಬಿದ್ದಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಣಿಮಡುಗು ಗ್ರಾಮದಲ್ಲಿ ಜರುಗಿದೆ.
ತಮಿಳುನಾಡಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ರಾಸುಗಳ ಓಟ ನಡೆಸುವುದು ಸಾಮಾನ್ಯ. ಅದರಂತೆ ಸಂಕ್ರಾಂತಿ ಹಬ್ಬದ ಆಚರಣೆ ಪ್ರಯುಕ್ತ ಇಂದು ರಾಸುಗಳ ಓಟವನ್ನು ಗ್ರಾಮಸ್ಥರು ಏರ್ಪಡಿಸಿದ್ದರು.
ಇದನ್ನೂ ಓದಿ:ಹಿಜಾಬ್ ಗಲಾಟೆ: ದಾವಣಗೆರೆ ಜಿಲ್ಲಾದ್ಯಂತ 20 ಪ್ರಕರಣ ದಾಖಲು, 30 ಜನರ ಬಂಧನ
ಈ ವೇಳೆ ಸ್ಥಳಕ್ಕಾಗಮಿಸಿದ್ದ ಕೆಜಿಎಫ್ ಡಿವೈಎಸ್ಪಿ ಮುರಳಿ ರಾಸುಗಳ ಓಟ ನಡೆಸದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡುತ್ತಿದ್ದರು. ಗ್ರಾಮಸ್ಥರ ಜೊತೆಗೆ ಮಾತನಾಡುತ್ತಿದ್ದ ವೇಳೆಯೇ ಜನರು ರಾಸುಗಳನ್ನು ಓಡಿಸಿದ್ದು, ಓಟದ ರಭಸಕ್ಕೆ ಡಿವೈಎಸ್ಪಿ ಕಾಲಿಗೆ ಹಗ್ಗ ಸಿಲುಕಿ ಅವರು ಕೆಳಗೆ ಬಿದ್ದರು. ಇದರಿಂದ ಮುರಳಿ ಅವರ ತಲೆ, ಕೈ, ಕಾಲಿಗೆ ಗಾಯಗಳಾಗಿದೆ. ಆಂಧ್ರದ ಕುಪ್ಪಂ ಸರ್ಕಾರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.