ಕೋಲಾರ : ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಇತ್ತೀಚೆಗೆ ಐವರು ಕೊರೊನಾ ಸೋಂಕಿತರು ಪ್ರಾಣ ಕಳೆದುಕೊಂಡು ಸುದ್ದಿಯಾಗಿತ್ತು.
ರಾಜ್ಯದ ಆರೋಗ್ಯ ಸಚಿವರು ಮತ್ತು ಉಪಮುಖ್ಯಮಂತ್ರಿಯ ಪ್ರವಾಸಗಳೂ ಜಿಲ್ಲೆಯಲ್ಲಿ ನಡೆಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ, ಬದಲಾಗಿ ಇನ್ನಷ್ಟು ಅವ್ಯವಸ್ಥೆ, ಆತಂಕಗಳು ಎದುರಾಗಿವೆ.
ಓದಿ: ಆಕ್ಸಿಜನ್ ಸಿಗದೇ ಐವರು ಮೃತಪಟ್ಟ ಪ್ರಕರಣ: ನ್ಯಾಯಕ್ಕಾಗಿ ಸಾಮಾಜಿಕ ಕಾರ್ಯಕರ್ತನಿಂದ ಹೈಕೋರ್ಟ್ ಮೊರೆ
ಕೋಲಾರ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಈವರೆಗೆ ಸಾಕಷ್ಟು ಆತಂಕಗಳನ್ನು ಸೃಷ್ಟಿಸಿದೆ. ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಜೊತೆಗೆ ಮರಣ ಪ್ರಮಾಣ ಕೂಡ ಹೆಚ್ಚಾಗಿದೆ.
ಇತ್ತೀಚೆಗೆ ಕಳೆದ 25ರಂದು ಕೋಲಾರದ ಎಸ್ಎನ್ಆರ್ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ವಾರ್ಡ್‌ಗೆ ಆಕ್ಸಿಜನ್ ವ್ಯತ್ಯಯದಿಂದಾಗಿ ಒಂದೇ ರಾತ್ರಿಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದರು.
ಕೊರೊನಾ ಸೋಂಕಿತರಿಗೆ ಜಿಲ್ಲೆಯಲ್ಲಿ ಬೆಡ್‌ಗಳ ಕೊರತೆ ಕೂಡ ಇದೆ. ಈ ಹಿನ್ನೆಲೆ ಆರೋಗ್ಯ ಸಚಿವರು ರಾತ್ರೋರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕರೂ ಸೇರಿದಂತೆ ಇಬ್ಬರನ್ನು ಸೇವೆಯಿಂದ ವಜಾ ಮಾಡಿದ್ದರು.
ಆದರೆ, ಇಷ್ಟೆಲ್ಲಾ ಆದರೂ ಕೂಡ ಆಸ್ಪತ್ರೆಯ ಪರಿಸ್ಥಿತಿಯಲ್ಲಿ ಬದಲಾವಣೆ ಆದಂತೆ ಕಾಣುತ್ತಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಈಗಲೂ ಕಾಡುತ್ತಿದೆ.
ಇದು ಜಿಲ್ಲಾಸ್ಪತ್ರೆಯಲ್ಲಿರುವ ಆಕ್ಸಿಜನ್ ಕೊರತೆಯ ವಿಚಾರವಾದರೆ ಜಿಲ್ಲೆಯಾದ್ಯಂತ ಇರುವ ಕೋವಿಡ್ ಬೆಡ್ ಕೊರತೆ ಈಗಲೂ ಮುಂದುವರೆದಿದೆ. ಜಿಲ್ಲೆಯಾದ್ಯಂತ ಕೊರೊನಾ ಪೀಡಿತರಿಗಾಗಿ ಮೀಸಲಿಟ್ಟ ಬೆಡ್‌ಗಳ ಸಂಖ್ಯೆ ಸರ್ಕಾರಿ ಮತ್ತು ಖಾಸಗಿ ಎರಡೂ ಸೇರಿದಂತೆ ಒಟ್ಟು ಮೂರು ಸಾವಿರ.
ಈಗ ಜಿಲ್ಲೆಯಲ್ಲಿ ಇರುವ ಸೋಂಕಿತರ ಸಂಖ್ಯೆ ಈಗಾಗಲೇ 3500 ದಾಟಿದೆ. ಇಂದಿನ ಸೋಂಕಿತರ ಸಂಖ್ಯೆ ಸೇರಿದಲ್ಲಿ ನಾಲ್ಕು ಸಾವಿರ ಸಕ್ರಿಯ ಪ್ರಕರಣಗಳಿವೆ. ಬೆಡ್ ಸಿಗದೆ ಖಾಸಗಿ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ, ಜಿಲ್ಲಾಸ್ಪತ್ರೆಯಿಂದ ಬೇರೆ ಆಸ್ಪತ್ರೆಗೆ ರೋಗಿಗಳ ಓಡಾಟ ಮುಂದುವರೆದಿದೆ.
ಜಿಲ್ಲೆಯಲ್ಲಿ ಆರ್ ಎಲ್ ಜಾಲಪ್ಪ ಆಸ್ಪತ್ರೆ, ಎಸ್ ಎನ್ ಆಸ್ಪತ್ರೆ ಸೇರಿದಂತೆ ಎಲ್ಲಾ ಆಸ್ಪತ್ರೆ ಗಳಲ್ಲಿಯೂ ಈಗ ಕೋವಿಡ್ ಪ್ರಕರಣಗಳು ತುಂಬಿ ತುಳುಕುತ್ತಿವೆ. ಈಗಿರುವ ಸೌಲಭ್ಯಗಳಲ್ಲಿ ಈಗಾಗಲೇ ಎಲ್ಲವೂ ಭರ್ತಿಯಾಗಿದೆ.