ಕರ್ನಾಟಕ

karnataka

ETV Bharat / state

ಕೋಲಾರ ಕ್ಷೇತ್ರ ಸಿದ್ದರಾಮಯ್ಯಗೆ ಕಬ್ಬಿಣದ ಕಡಲೆಯಾಗುತ್ತಾ..? ಸುಲಭವಾಗಿ ಒಲಿಯುತ್ತಾ?

ಕ್ಷೇತ್ರ ಹುಡುಕಾಟದಲ್ಲಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೊನೆಗೂ ಕೋಲಾರ ಕ್ಷೇತ್ರದ ಆಯ್ಕೆ - ಕೋಲಾರ ಕ್ಷೇತ್ರದಲ್ಲಿ ಸಿದ್ದುಗೆ ಎದುರಾಗ ಬಹುದಾದ ಸವಾಲು, ಸಂಕಷ್ಟಗಳೇನು? - ತನ್ನದೆ ಸಮುದಾಯದ ಎದುರಾಳಿ ಬಿಜೆಪಿ ಅಭ್ಯರ್ಥಿ ಸಿದ್ದುಗೆ ಪ್ರಬಲ ಪೈಪೋಟಿ

Leader of Opposition Siddaramaiah
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

By

Published : Jan 9, 2023, 10:35 PM IST

Updated : Jan 10, 2023, 4:08 PM IST

ಕೋಲಾರ:ಕ್ಷೇತ್ರ ಹುಡುಕಾಟದಲಿದ್ದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೂ ಅಳೆದು ತೂಗಿ ಕೋಲಾರ ಕ್ಷೇತ್ರವನ್ನು ಅಂತಿಮ ಗೊಳಿಸಿದ್ದಾರೆ. ಆದರೆ, ಕೋಲಾರ ಸಿದ್ದುಗೆ ಅಷ್ಟೊಂದು ಸೇಫ್ ಅಲ್ಲ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಕೋಲಾರದಲ್ಲಿ ಸಿದ್ದುಗೆ ತನ್ನದೇ ಸಮುದಾಯದ ಹಳೇ ಶಿಷ್ಯ ಒಳ ಏಟು ನೀಡುವ ಎಲ್ಲ ಸಾಧ್ಯತೆಗಳಿದ್ದು, ಸಂಕಷ್ಟಕ್ಕೆ ಕಾರಣವಾಗಬಹುದು.

ಸಿದ್ದುಗೆ ಎದುರಾಗ ಬಹುದಾದ ಸವಾಲುಗಳೇನು? :ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಹೈಕಮಾಂಡ್ ಒಪ್ಪಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಕೋಲಾರ ಕ್ಷೇತ್ರ ಸಿದ್ದುಗೆ ಕಬ್ಬಿಣದ ಕಡಲೆ ಆಗುತ್ತಾ ಎನ್ನುವ ಸಂದೇಹವೂ ಈಗ ವ್ಯಕ್ತವಾಗುತ್ತಿದೆ.

ಒಕ್ಕಲಿಗ ಪ್ರಾಬಲ್ಯವಿರುವ ಜೆಡಿಎಸ್ ಭದ್ರಕೋಟೆ ಕೋಲಾರಕ್ಕೆ ಸಿದ್ದು ಎಲ್ಲರ ಮುಂದೆ ನಾವೆಲ್ಲಾ ಒಂದಾಗಿದ್ದೇವೆ, ನಮ್ಮಲ್ಲಿ ಗುಂಪುಗಾರಿಕೆ ಇಲ್ಲ, ಅನ್ನೋ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಒಲ್ಲದ ಮನಸ್ಸಿನಿಂದಲೇ ಆಗಮಿಸಿದರು. ಬೆಂಗಳೂರಿನ ನಿವಾಸದಲ್ಲೇ ಮನವೊಲಿಸಿ ಕೆ.ಎಚ್.ಮುನಿಯಪ್ಪ ಸಿದ್ದರಾಮಯ್ಯ ಅವರನ್ನು ಕೋಲಾರದ ಕಾಂಗ್ರೆಸ್​ ಸಮಾವೇಶಕ್ಕೆ ಕರೆ ತಂದಿದ್ದರು. ಆದರೆ, ಇದುವರೆಗಿನ ವೈಮನಸ್ಸು ಸಂಪೂರ್ಣ ಕರಗಿ ಹೋಗಿತಾ ಎಂಬ ಅನುಮಾನಗಳು ಮಾತ್ರ ಹಾಗೆ ಉಳಿದಿವೆ.

ಅಹಿಂದಾ ನೆಚ್ಚಿಕೊಂಡು ಕೋಲಾರಕ್ಕೆ ಎಂಟ್ರಿಕೊಟ್ಟಿರುವ ಸಿದ್ದುಗೆ ಒಂದು ಕಾಲದ ಹಳೆಯ ಶಿಷ್ಯ, ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವರ್ತೂರು ಪ್ರಕಾಶ್ ಗುರುವಿಗೆ ಟಾಂಗ್ ಕೊಡಲು ಸಿದ್ದರಾಗಿದ್ದಾರೆ. ಆ ಮೂಲಕ ಕಳೆದ 15 ವರ್ಷಗಳಿಂದ ಜಿಲ್ಲೆಯ ಮಟ್ಟಿಗೆ ವರ್ತೂರು ಪ್ರಕಾಶ್ ಅವರೇ ಅಹಿಂದಾ ನಾಯಕ ಆಗಿದ್ದು, ಕೋಲಾರ ಕ್ಷೇತ್ರದ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ತಿರುಗಬಾಣವಾಗಬಹುದು ಎಂದು ಹೇಳಲಾಗುತ್ತಿದೆ. ಕೋಲಾರ ಕ್ಷೇತ್ರದಲ್ಲಿ ತನ್ನದೇ ಆದ ಮತ ಬ್ಯಾಂಕ್ ಹೊಂದಿರುವ ಕೋಲಾರ ಟಗರು ವರ್ತೂರು ಪ್ರಕಾಶ್​, ಮೈಸೂರು ಟಗರು ಸಿದ್ದು ವಿರುದ್ದ ಗುಟುರು ಹಾಕ್ತಾರಾ ಎಂಬುದೇ ಈಗಿನ ಕುತೂಹಲ.

ಇನ್ನೂ ರಮೇಶ್ ಕುಮಾರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್​ ನಾಯಕರ ಒತ್ತಡಕ್ಕೆ ಮಣಿದು ಮಗನಿಗೆ ತವರು ಕ್ಷೇತ್ರವಾದ ವರುಣಾವನ್ನು ಬಿಟ್ಟು ಕೊಟ್ಟು ಸಿದ್ದರಾಮಯ್ಯ ಕೋಲಾರ ಕ್ಷೇತ್ರವನ್ನ ಅಂತಿಮಗೊಳಿಸಿದ್ದಾರೆ ಎನ್ನಲಾಗುತ್ತಿದೆ. ಕೋಲಾರ ಕ್ಷೇತ್ರ ಸೇಫ್ ಅಂದುಕೊಂಡಿರುವ ಸಿದ್ದುಗೆ ಜೆಡಿಎಸ್ ಭದ್ರಕೋಟೆ ಹಾಗೂ ಒಕ್ಕಲಿಗರ ಪ್ರಾಬಲ್ಯವಿರುವ ಈ ಭಾಗದಲ್ಲಿ ಸ್ಪರ್ಧೆಗೆ ಮುಂದಾಗಿದ್ದು, ಇಲ್ಲೂ ಹೊಡೆತ ಬೀಳುವ ಸಾಧ್ಯಗಳಿವೆ.

ಹೆಚ್​.ಡಿ ಕುಮಾರಸ್ವಾಮಿ ಕೋಲಾರಕ್ಕೆ ಎಂಟ್ರಿ, ಸಿದ್ದುಗೆ ಸಂಕಷ್ಟ ತರುತ್ತಾ? : ಒಂದು ವೇಳೆ ಹಟಕ್ಕೆ ಬಿದ್ದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಸಿದ್ದುಗೆ ಸಂಕಷ್ಟ ಕಟ್ಟಿಟ್ಟ ಭುತ್ತಿ ಎನ್ನಲಾಗುತ್ತಿದೆ. ಅಲ್ಲದೇ ಜೆಡಿಎಸ್ ಅಭ್ಯರ್ಥಿ ಬದಲಾಗಿ, ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸಿ ಸಿದ್ದುಗೆ ಟಕ್ಕರ್ ಕೊಟ್ರೆ, ಮುಸ್ಲಿಂ ಹಾಗೂ ಒಕ್ಕಲಿಗ ವೋಟ್ ಚದುರಲಿವೆ. ಮುಸ್ಲಿಂ ಹಾಗೂ ಒಕ್ಕಲಿಗ ಮತಗಳು ವಿಭಾಗವಾಗುವ ಮೂಲಕ ಸಿದ್ದುಗೆ ಮತ್ತೆ ಚಾಮುಂಡಿ ಕ್ಷೇತ್ರದಂತೆ ಸಂಕಷ್ಟ ಎದುರಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಏಕೆಂದರೆ ಕೋಲಾರ ಕ್ಷೇತ್ರದಲ್ಲಿ ಕಳೆದ ಬಾರಿಯೂ ಜೆಡಿಎಸ್ ಅಭ್ಯರ್ಥಿ 40 ಸಾವಿರ ಅಂತರದಿಂದ ಗೆಲುವಾಗಿದೆ, ಗೆಲುವಾದ ಅಭ್ಯರ್ಥಿ ಶ್ರೀನಿವಾಸಗೌಡ ಸದ್ಯ ಕಾಂಗ್ರೆಸ್​​​​ಗೆ ಬೆಂಬಲ ಸೂಚಿಸಿದ್ದಾರೆ. ಮತ್ಯಾವ ಮೊದಲ ಹಂತದ ನಾಯಕರು ಕಾಂಗ್ರೆಸ್​ಗೆ ಬಂದಿಲ್ಲ. ಆ ಮೂಲಕ ಕೋಲಾರದಲ್ಲಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ಹವಾ ಜೋರಾಗಿಯೇ ಇದೆ ಎಂದು ಹೇಳಲಾಗುತ್ತಿದೆ, ಇದು ಸಿದ್ದುಗೆ ಮತ್ತೊಂದು ಸಂಕಷ್ಟ ತಂದರೂ ತರಬಹುದು ಎನ್ನುವುದು ಕ್ಷೇತ್ರದ ಜನರ ಮಾತು.

ಒಟ್ಟಿನಲ್ಲಿ ಅಹಿಂದ ನಾಯಕ, ರಾಜ್ಯದ ಮಾಸ್ ಲೀಡರ್ ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ ಅಂದುಕೊಂಡಷ್ಟು ಸುಲಭವಲ್ಲ. ಜಿಲ್ಲಾ ಕಾಂಗ್ರೆಸ್‌ನಲ್ಲಿನ ಒಳ ಏಟು, ಜೆಡಿಎಸ್ ನಾಯಕರ ನಿರ್ಧಾರ, ಜಾತಿ ಸಮೀಕರಣ, ತನ್ನದೇ ಸಮುದಾಯದ ಎದುರಾಳಿ, ಅಹಿಂದಾ ಮತಗಳು ಉಲ್ಟಾ ಹೊಡೆದರೆ ಸಿದ್ದು ಸಂಕಷ್ಟ ತಪ್ಪಿದ್ದಲ್ಲ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಹಿಂದಿನ ಚುನಾವಣೆಗಳ ಫಲಿತಾಂಶ ನೋಡುವುದಾದರೆ :2013ರ ವಿಧಾನಸಭೆ ಚುನಾವಣೆಯಲ್ಲಿ ವರ್ತೂರ್ ಪ್ರಕಾಶ್ ಪಕ್ಷೇತರವಾಗಿ ಸ್ಪರ್ಧಿಸಿ 62,957 ಮತಗಳನ್ನು ಪಡೆದಿದ್ದು, ಪ್ರಬಲ ನಾಯಕರಾದ ಕೆ.ಶ್ರೀನಿವಾಸಗೌಡ ಜೆಡಿಎಸ್​ ಪಕ್ಷದಿಂದ ಸ್ಪರ್ಧಿಸಿ 50,366 ಮತಗಳನ್ನು ಪಡೆದಿದ್ದರು. ಇನ್ನು ನಜೀರ್ ಅಹ್ಮದ್ ಕಾಂಗ್ರೆಸ್​ದ ಪರ 41510 ಮತಗಳು ಹಾಗೂ ಎಂ.ಎಸ್.ಆನಂದ್​ ಬಿಜೆಪಿ ಪಕ್ಷ ಸ್ಪರ್ಧಿಯಾಗಿ 1600ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ, ಈ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ ವರ್ತೂರ್ ಪ್ರಕಾಶ್ 20 ಸಾವಿರಕ್ಕೂ ಮತಗಳಿಂದ ಕೆ.ಶ್ರೀನಿವಾಸಗೌಡರನ್ನು ಹಿಂದಕ್ಕಿ ಭರ್ಜರಿ ಗೆಲುವು ಸಾಧಿಸಿದ್ದರು.

ಕಳೆದ ಬಾರಿ 2018ರ ವಿಧಾನಸಭೆ ಚುನಾವಣೆ ಫಲಿತಾಂಶಗಳನ್ನು ನೋಡುವುದದಾರೆ ಎಲ್ಲ ಲೆಕ್ಕಚಾರ ಬದಲಾಗಿತ್ತು. ವರ್ತೂರ್ ಪ್ರಕಾಶ್ ನಮ್ಮ ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸಿ ಕೇವಲ 35544 ಮತಗಳು ಗಳಿಸಲು ಮಾತ್ರವೇ ಸಾಧ್ಯವಾಗಿತ್ತು. ಆದರೆ ಎದುರಾಳಿ ಕೆ.ಶ್ರೀನಿವಾಸಗೌಡ ಜೆಡಿಎಸ್​ಯಿಂದ ಸ್ವರ್ಧೆ ಮಾಡಿ 82,788 ಮತಗಳು ಪಡೆದು ಕೊಂಡಿದ್ದರು. ಈ ಚುನಾವಣೆಯಲ್ಲಿ ಬರೋಬ್ಬರಿ 43135 ಮತಗಳ ಅಂತರದಲ್ಲಿ ವರ್ತೂರ್ ಪ್ರಕಾಶ್ ವಿರುದ್ದ ಅವರು ಜಯಗಳಿಸಿದ್ದರು.

ಇನ್ನುಳಿದಂತೆ ಜಮೀರ್ ಪಾಷಾ ಕಾಂಗ್ರೆಸ್​ನಿಂದ ಕಣಕ್ಕೆ ಇಳಿದು 38537 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನಕ್ಕೆ ಕುಸಿದಿದ್ದರು. ಇನ್ನು ಬಿಜೆಪಿಯಿಂದ ವೆಂಕಟಾಚಲಪತಿ(ಓಂ ಶಕ್ತಿ ಚಲಪತಿ) ಸ್ಪರ್ಧಿಸಿ, 12230 ಮತಗಳು ಪಡೆದುಕೊಂಡು ಭಾರಿ ಹಿನ್ನಡೆ ಕಂಡಿದ್ದರು. ಈ ಭಾರಿ ಗೆಲುವು ಯಾರ ಪಾಲಾಗುತ್ತದೆ ಎಂಬುದನ್ನು ನೋಡಬೇಕಾಗಿದೆ.

ಇದನ್ನೂ ಓದಿ :ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ.. ಜೆಡಿಎಸ್​ನಲ್ಲಿ ಗರಿಗೆದರಿದ ರಾಜಕೀಯ ಲೆಕ್ಕಾಚಾರ

Last Updated : Jan 10, 2023, 4:08 PM IST

ABOUT THE AUTHOR

...view details