ಕೋಲಾರ: ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಜಿಲ್ಲೆಯ ನಾಯಕರು ಒಂದಾಗುವ ಮೂನ್ಸೂಚನೆ ನೀಡಿದ್ದಾರೆ. ತಮ್ಮ ಹಾಗೂ ಪಕ್ಷದ ಗೆಲುವಿಗಾಗಿ ಹಾವು-ಮುಂಗುಸಿಯಂತಿದ್ದ ನಾಯಕರು ಈಗ ಸಾಫ್ಟ್ ಆಗಿದ್ದಾರೆ. ತಮ್ಮ ಪ್ರತಿಷ್ಠೆ ಬದಿಗಿಟ್ಟು, ಜಗಳ ಮರೆತು ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದಾರೆ.
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಜಿಲ್ಲೆಯ ನಾಯಕರಲ್ಲಿನ ಮುನಿಸು ತಗ್ಗುವ ಮುನ್ಸೂಚನೆ ಸಿಕ್ಕಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಅತಿ ಕುತೂಹಲ ಕೆರಳಿಸುತ್ತಿರುವ ವಿಷಯ ಕೋಲಾರ ಕಾಂಗ್ರೆಸ್ಸ್ನ ಒಳ ಜಗಳ. ಈಗಾಗಲೇ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಹಾಗೂ ಮುನಿಯಪ್ಪ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ವೇಳೆ ಕ್ಷೇತ್ರ ಯಾವುದು ಅನ್ನೋದನ್ನು ಖಾಲಿ ಬಿಟ್ಟಿದ್ದಾರೆ.
ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಕೂಡ ಕೋಲಾರ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ ನಾಯಕರನ್ನು ಸೇರಿಸಿ ಸಭೆಗಳನ್ನು ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಗೆಲುವು ಕಷ್ಟ, ಕೋಲಾರ ಕಾಂಗ್ರೆಸ್‌ನಲ್ಲಿ ಗೊಂದಲ ಸಮಸ್ಯೆ ಇದೆ. ಅದನ್ನು ಸರಿಪಡಿಸಿಕೊಂಡು ಕೋಲಾರಕ್ಕೆ ಬಂದರೆ ಅನುಕೂಲ ಎಂದು ಸಿದ್ದರಾಮಯ್ಯಗೆ ಸಲಹೆ ಹಾಗೂ ಎಚ್ಚರಿಕೆ ನೀಡಿದ್ದೇನೆ ಎಂದಿದ್ದಾರೆ.
ಅಲ್ಲದೇ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್‌ನಲ್ಲಿ ಯಾರೂ ಸಂಚು ಮಾಡುತ್ತಿಲ್ಲ. ಆದರೆ, ಅವರು ಮೂಲ ಹಾಗೂ ಕಾಂಗ್ರೆಸ್ ನಿಷ್ಠರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆ ಮೂಲಕ ಸಿದ್ದರಾಮಯ್ಯ ಕೋಲಾರಕ್ಕೆ ಬಂದ್ರೆ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ ಸಿದ್ದು ಪರವಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ, ಹಳೆಯ ಬೇಸರವನ್ನೆಲ್ಲಾ ಮರೆತಿದ್ದೇನೆ. ಆಗಿದ್ದು ಆಗೋಯ್ತು ಎನ್ನುವ ಮೂಲಕ ಹೊಂದಾಣಿಕೆಯ ಮಾತುಗಳನ್ನಾಡುತ್ತಿದ್ದಾರೆ ಕೆ ಹೆಚ್ ಮುನಿಯಪ್ಪ.