ಕೋಲಾರ: ಹಲವು ವರ್ಷಗಳಿಂದ ನೂರಾರು ವಿಷಯಗಳಲ್ಲಿ ದೇಶ, ವಿಶ್ವಮಟ್ಟದಲ್ಲಿ ತನ್ನ ಹೆಸರು ದಾಖಲಿಸಿಕೊಂಡಿರುವ ಕೋಲಾರಕ್ಕೆ ಈಗ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ ಮೂಡಿದೆ. ಕೋಲಾರ ಮೂಲದ ಮಹಿಳೆ ಕೆ ಪಿ ಅಶ್ವಿನಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಜನಾಂಗೀಯ ಭೇದದ ಕುರಿತ ಸ್ವತಂತ್ರ್ಯ ತಜ್ಞರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಗೆ ಏಷ್ಯಾದಿಂದ ಆಯ್ಕೆಯಾದ ಮೊಲದ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಇಂದು ಕೋಲಾರ ಜಿಲ್ಲೆಯ ರೇಣುಕಾ ಯಲ್ಲಮ್ಮ ಬಳಗದ ವತಿಯಿಂದ ಕೆ ಪಿ ಅಶ್ವಿನಿ ಅವರಿಗೆ ಸನ್ಮಾನ ಮಾಡಲಾಯಿತು.
ದಲಿತ ಹೋರಾಟದ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಅಶ್ವಿನಿ ಬಂದವರು. ದಲಿತರು ಹಾಗೂ ಶೋಷಿತರ ಪರವಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದುಳಿದ ಹಾಗೂ ಶೋಷಿತರ ಪರವಾಗಿ ಸಾಕಷ್ಟು ಅಧ್ಯಯನವನ್ನೂ ಮಾಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಶೋಷಿತರ ಪರವಾಗಿ ಧ್ವನಿ ಎತ್ತಲು ವಿಶ್ವಮಟ್ಟದಲ್ಲಿ ನನಗೆ ಅವಕಾಶ ಸಿಕ್ಕಿದೆ ಅನ್ನೋದು ಅವರ ಮಾತು.
ತಂದೆ ಕೆಎಎಸ್ ಅಧಿಕಾರಿ: ಅಶ್ವಿನಿ ಅವರ ತಂದೆ ಪ್ರಸನ್ನ ಕುಮಾರ್ ಹಾಗೂ ಜಯಮ್ಮ ಮೂಲತ: ಕೋಲಾರ ತಾಲೂಕಿನ ಕುರುಬರಹಳ್ಳಿಯವರು. ಪ್ರಸನ್ನ ಕುಮಾರ್ 1985 ರಲ್ಲಿ ಕೆಎಎಸ್ ಅಧಿಕಾರಿಯಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.