ಕೋಲಾರ : ಜಿಲ್ಲೆಯ ಮಾಲೂರು ತಾಲೂಕಿನ ಕೆರೆಗಳಿಗೆ ಕೆ.ಸಿ.ವ್ಯಾಲಿ ಯೋಜನೆಯ ನೀರು ನಿರೀಕ್ಷಿತ ಮಟ್ಟದಲ್ಲಿ ಹರಿಯುತ್ತಿಲ್ಲ ಎಂದು ಮಾಲೂರು ಶಾಸಕ ಕೆ.ವೈ ನಂಜೇಗೌಡ ಆಕ್ರೋಶ ಹೊರ ಹಾಕಿದ್ದಾರೆ.
ಕೋಲಾರ ತಾಲೂಕಿನ ನರಸಾಪುರ ಬಳಿ ಇರುವ ಪಂಪ್ ಹೌಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಿತ್ಯ ಎಷ್ಟು ಪ್ರಮಾಣದಲ್ಲಿ ನೀರು ಪಂಪ್ ಮಾಡಲಾಗ್ತಿದೆ, ಯಾವ ಕೆರೆಗಳಿಗೆ ನೀರು ಹರಿದಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡರು.
ಬಳಿಕ ಜಿಲ್ಲಾಧಿಕಾರಿಗಳು ಹಾಗೂ ಕೆ.ಸಿ.ವ್ಯಾಲಿ ಅಧ್ಯಕ್ಷರಾಗಿರುವ ಮಂಜುನಾಥ್ ಜೊತೆ ದೂರವಾಣಿ ಮೂಲಕ ಮಾತನಾಡಿ, ಬೇಸಿಗೆ ಆರಂಭವಾಗಿದ್ದು, ಕೂಡಲೇ ನಮ್ಮ ಪಾಲಿನ ನೀರನ್ನು ಹರಿಸಬೇಕು ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿ, ಬೆಂಗಳೂರಿನ ಬೆಳ್ಳಂದೂರು ಕೆರೆಯಿಂದ ಕೋಲಾರದ ಲಕ್ಷ್ಮೀಸಾಗರ ಕೆರೆಗೆ ನಿತ್ಯ ಎರಡು ಹಂತದಲ್ಲಿ 270 ಎಂಎಲ್‌ಡಿ ನೀರು ಶುದ್ದೀಕರಿಸಿ ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನರಸಾಪುರ ಕೆರೆ ಮೂಲಕ ಕೋಲಾರ, ಮಾಲೂರು ಮತ್ತು ಶ್ರೀನಿವಾಸಪುರ ತಾಲೂಕಿನ ಕೆರೆಗಳಿಗೆ ನೀರನ್ನು ಪಂಪ್ ಮಾಡುವ ಮೂಲಕ ಹರಿಸಲಾಗುತ್ತಿದೆ. ಕೆಲ ತಿಂಗಳ ಹಿಂದೆ ಕೋಲಾರದ ನರಸಾಪುರ ಕೆರೆಯಿಂದ ಮಾಲೂರು ತಾಲೂಕಿನ ಭಾಗಕ್ಕೆ 60 ಎಂಎಲ್ ಡಿ ನೀರು ಹರಿಸಲು ಅಧಿಕೃತ ಚಾಲನೆ ನೀಡಿದ್ದರೂ. ಈಗ ಏಕಾಏಕಿ ಒಪ್ಪಂದಂತೆ ಮಾಲೂರಿಗೆ ನೀರು ಹರಿಸದೇ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನರಸಾಪುರ ಕೆರೆಯಿಂದ ಮಾಲೂರಿನ ಶಿವಾರಪಟ್ಟಣ ಕೆರೆ ತುಂಬಿ ಅಲ್ಲಿಂದ ನೀರನ್ನು ಪಂಪ್ ಮಾಡಲು ಪಂಪ್ ಹೌಸ್ ಸಹ ನಿರ್ಮಾಣ ಮಾಡಲಾಗಿದೆ. ಆದರೆ, ನಿಗದಿತ ಪ್ರಮಾಣದಲ್ಲಿ ನೀರು ಇಲ್ಲಿಯವರೆಗೂ ಬಂದಿಲ್ಲ . ಇನ್ನು ಐದು ದಿನದಲ್ಲಿ ತಾಲೂಕಿಗೆ ನೀರು ಹರಿಸಬೇಕು, ಇಲ್ಲದಿದ್ದರೆ 10 ಸಾವಿರ ರೈತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ, ಸಂಸದ ಮುನಿಸ್ವಾಮಿ ವಿರುದ್ಧವೂ ಹರಿಹಾಯ್ದ ಅವರು, ನೀವು ಸಹ ಮಾಲೂರಿನ ತಾಲೂಕಿನವರು, ಸ್ವಲ್ಪ ಮುತುವಜಿ೯ ವಹಿಸಿ ನಮ್ಮ ಪಾಲಿನ ನೀರು ಹರಿಸಲು ಸಹಕರಿಸಬೇಕು. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.