ಕೋಲಾರ: ಅವಳು ಬರದ ನಾಡಿನ ದಣಿವಾರಿಸಲು ಬಂದಿದ್ದ ಗಂಗಾ ಮಾತೆ. ನೀರಿಗಾಗಿ ಬಸವಳಿದು ಹೋಗಿದ್ದ ಆ ಜನರಿಗೆ ಆಕೆ ಜೀವದಾತೆ. ಕೆಲವು ಕಾರಣಗಳಿಂದ ನಿಂತು ಹೋಗಿದ್ದ ನೀರು ಮತ್ತೆ ಹರಿಯಲು ಆರಂಭಿಸಿದೆ. ಆ ಜನರಲ್ಲೀಗ ಸಂತಸ, ಸಂಭ್ರಮ ಇಮ್ಮಡಿಯಾಗಿದ್ದು, ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ.
ಬರದ ನಾಡು ಕೋಲಾರ ಜಿಲ್ಲೆಯ ದಣಿವಾರಿಸಲು ಮಾಡಲಾದ ನೀರಾವರಿ ಯೋಜನೆ ಕೆಸಿ ವ್ಯಾಲಿ ಯೋಜನೆ. ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರದ ಕೆರೆಗಳಿಗೆ ಹರಿಸುವ ಕೆಸಿ ವ್ಯಾಲಿ ಯೋಜನೆ 2018ರ ಜೂನ್ 1ರಂದು ಆರಂಭವಾಯಿತು. ಆದರೆ 2 ತಿಂಗಳಲ್ಲಿ ನೀರಿನ ಶುದ್ಧತೆಯನ್ನು ಪ್ರಶ್ನಿಸಿ ಹೈಕೋರ್ಟ್ನಿಂದ ತಡೆಯಾಜ್ಞೆ ಬಂತು. ನಂತರ ಹೈಕೋರ್ಟ್ನಿಂದ ತಡೆಯಾಜ್ಞೆ ತೆರವಾದ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ನಿಂದ ತಡೆಯಾಜ್ಞೆ ತರಲಾಗಿತ್ತು.
ಕೆಸಿ ವ್ಯಾಲಿಗೆ ಮತ್ತೆ ಹರಿದ ನೀರು ಸರ್ಕಾರದ ಅಧಿಕಾರಿಗಳು ಕೋರ್ಟ್ಗೆ ಸೂಕ್ತ ದಾಖಲಾತಿಗಳನ್ನು ನೀಡಿದ ಹಿನ್ನೆಲೆ ಏಪ್ರಿಲ್ 5ರಂದು ಸುಪ್ರೀಂ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಹಿನ್ನೆಲೆ ಇಂದಿನಿಂದ ಮತ್ತೆ ಕೆಸಿ ವ್ಯಾಲಿ ನೀರು ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ಜಿಲ್ಲೆಯ ಸಾವಿರಾರು ಸಂಖ್ಯೆಯ ಮಹಿಳೆಯರು, ರೈತರು, ವಿವಿಧ ಸಂಘನೆಗಳ ಮುಖಂಡರು, ರಾಜಕೀಯ ನಾಯಕರು, ಕೆಸಿ ವ್ಯಾಲಿ ಹರಿಯುವ ಕೋಲಾರ ತಾಲೂಕು ಲಕ್ಷ್ಮೀಸಾಗರ ಕೆರೆಯ ಬಳಿಗೆ ಬಂದಿದ್ರು. ಮತ್ತೆ ಜಿಲ್ಲೆಗೆ ನೀರು ಹರಿಯುವುದನ್ನು ಕಂಡು ನೀರಿನಲ್ಲಿ ಕುಣಿದು ಕುಪ್ಪಳಿಸಿ ಯೋಜನೆಗೆ ಶ್ರಮಿಸಿದ ಸ್ಪೀಕರ್ ರಮೇಶ್ ಕುಮಾರ್ಗೆ ಜೈಕಾರಗಳನ್ನು ಕೂಗಿ ಅಭಿನಂದನೆ ಸಲ್ಲಿಸಿದ್ರು.
ತಮ್ಮ ಗ್ರಾಮಗಳಿಂದ ತಂಬಿಟ್ಟು, ದೀಪಾರತಿಗಳೊಂದಿಗೆ ಲಕ್ಷ್ಮೀಸಾಗರ ಕೆರೆಯ ಬಳಿ ಬಂದು ಪೂಜೆ ಸಲ್ಲಿಸಿದ್ರು. ಶಾಸಕರುಗಳಾದ ಕೆ.ಶ್ರೀನಿವಾಗೌಡ, ಹೆಚ್.ನಾಗೇಶ್, ಎಸ್.ಎನ್.ನಾರಾಯಣಸ್ವಾಮಿ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ಹಲವಾರು ಮುಖಂಡರು ಪೂಜೆ ಸಲ್ಲಿಸಿ ನೀರಿನಲ್ಲಿ ಸಂಭ್ರಮಿಸಿದರು.