ಕೋಲಾರ:ಆಲೂಗಡ್ಡೆ ಬೀಜಗಳನ್ನ ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಏಜೆಂಟರು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೋಲಾರದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದವರು, ಕೊರೊನಾ ಮಹಾಮಾರಿಯಿಂದಾಗಿ ಈಗಾಗಲೇ ರೈತರು ಕೈ ಸುಟ್ಟುಕೊಂಡಿದ್ದಾರೆ, ಇದೀಗ ಕೋಲಾರ ಜಿಲ್ಲಾ ರೈತರ ಪ್ರಮುಖ ತೋಟಗಾರಿಕೆ ಬೆಳೆಯಾಗಿರುವ ಆಲೂಗಡ್ಡೆ ಬಿತ್ತನೆ ಬೀಜಗಳಿಗೆ ಭಾರಿ ಡಿಮಾಂಡ್ ಇರುವ ಪರಿಣಾಮ ಇದನ್ನೇ ಏಜೆಂಟರು ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.
ಅಲ್ಲದೆ ಏಜೆಂಟ್ ಗಳು ತಮಗೆ ಬೇಕಾದ ರೀತಿಯಲ್ಲಿ ಆಲೂಗಡ್ಡೆ ಬಿತ್ತನೆ ಬೀಜವನ್ನು ಮಾರಾಟ ಮಾಡಿ ರೈತರಿಂದ ಸುಲಿಗೆ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಹಾಸನ ಮಾದರಿ ಕೋಲಾರದಲ್ಲೂ ಕೂಡ ಬೀಜದ ಬೆಲೆಯನ್ನ ಸರ್ಕಾರವೇ ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಇನ್ನು ಕೋಲಾರದಲ್ಲಿ ದಲ್ಲಾಳಿಗಳು 100 ಕೆ.ಜಿ ಆಲೂಗಡ್ಡೆ ಬಿತ್ತನೆ ಬೀಜವನ್ನ, 5 ಸಾವಿರದಿಂದ 6 ಸಾವಿರದವರೆಗೂ ಮಾರಾಟ ಮಾಡುತ್ತಿದ್ದು, ಹಾಸನದಲ್ಲಿ 100 ಕೆಜಿ ಆಲೂಗಡ್ಡೆ ಬೀಜಕ್ಕೆ ಕೇವಲ 2200 ರೂಪಾಯಿ ನಿಗದಿ ಮಾಡುವ ಮೂಲಕ ಅಲ್ಲಿನ ರೈತರಿಗೆ ಜಿಲ್ಲಾಡಳಿತ ನೆರವಾಗಿದೆ ಎಂದರು.
ಅಲ್ಲದೆ ಹಾಸನ ಮಾದರಿ ಬಿತ್ತನೆ ಬೀಜದ ದರವನ್ನು ಜಿಲ್ಲಾಡಳಿತ ನಿಗದಿಪಡಿಸಿ ರೈತರ ನೆರವಿಗೆ ಬರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.