ಕೋಲಾರ:ಕೊರೊನಾ ಸೋಂಕಿತ ವ್ಯಕ್ತಿಯಿಂದ ಜಿಲ್ಲೆಯಲ್ಲಿ ಭಯ ಶುರುವಾಗಿದ್ದು, ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದ ವ್ಯಕ್ತಿಯಿಂದ ಆತಂಕ ಎದುರಾಗಿದೆ.
ಕೊರೊನಾ ಸೋಂಕಿತ ವ್ಯಕ್ತಿ ಪಿ -4,863 ಜೂನ್ 3 ರಂದು ಆಂಧ್ರ ಪ್ರದೇಶದ ತಿರುಪತಿಯಿಂದ ಕೋಲಾರಕ್ಕೆ ಬಂದಿದ್ದ. ತಿರುಮಲದಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿಯ ವಾಸವಿ ಹೋಟೆಲ್ನಲ್ಲಿ ಕೆಲಸಬೇಕೆಂದು ಕೇಳಿಕೊಂಡು ಬಂದಿದ್ದ. ಆದರೆ ಹೋಟೆಲ್ ಮಾಲೀಕ ಹೊರರಾಜ್ಯದಿಂದ ಬಂದಿರುವ ಕಾರಣ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ.
ಅದರಂತೆ ಆ ವ್ಯಕ್ತಿಯು ಕೋಲಾರ ಜಿಲ್ಲಾಸ್ಪತ್ರೆ ಎಸ್ಎನ್ಆರ್ಗೆ ಹೋಗಿ ಗಂಟಲು ದ್ರವದ ಮಾದರಿ ನೀಡಿ ಬಂದಿದ್ದ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ವಿಳಾಸ ಬರೆದುಕೊಂಡು ವರದಿ ಬರುವವರೆಗೆ ಹೋಂ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಿದ್ದಾರೆ.
ಆತನ ವರದಿ ಪಾಸಿಟಿವ್ ಬಂದಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಕರೆ ಮಾಡಿ ಆಸ್ಪತ್ರೆಗೆ ಬಂದು ದಾಖಲಾಗುವಂತೆ ಸೂಚನೆ ನೀಡಿದ್ದಾರೆ. ಗಾಬರಿಗೊಂಡ ಸೋಂಕಿತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.
ಕೋಲಾರದಲ್ಲಿ ಮನೆ ಮಾಡಿದ ಕೊರೊನಾ ಆತಂಕ ಇದರಿಂದ ಗಾಬರಿಗೊಂಡ ಆರೋಗ್ಯ ಇಲಾಖೆ ಸಿಬ್ಬಂದಿ ಆತ ನೀಡಿದ್ದ ವಿಳಾಸವನ್ನು ಪರಿಶೀಲನೆ ಮಾಡಿದಾಗ, ಆತ ಬಂಗಾರಪೇಟೆ ವಾಸವಿ ಹೋಟೆಲ್ ವಿಳಾಸ ನೀಡಿದ್ದು, ಆ ಹೆಸರಿನ ಹೋಟೆಲ್ ಅಲ್ಲಿ ಇಲ್ಲ ಎಂದು ತಿಳಿದು ಬಂದಿದೆ.
ನಂತರ ಪೊಲೀಸರು ಆತನ ಮೊಬೈಲ್ ನಂಬರ್ ಪಡೆದು ಪರಿಶೀನೆ ನಡೆಸಿದಾಗ ಆತ ಕೋಲಾರ ನಗರದಲ್ಲೇ ಓಡಾಡಿರುವುದು ದೃಢವಾಗಿದೆ. ಜೊತೆಗೆ ಆತ ಬಂಗಾರಪೇಟೆ ಬದಲಾಗಿ ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿ ಇರುವ ವಾಸವಿ ಹೋಟೆಲ್ನಲ್ಲಿ ಕೆಲಸ ಕೇಳಿಕೊಂಡು ಹೋಗಿದ್ದ ಮಾಹಿತಿ ತಿಳಿದಿದೆ.
ಮೊಬೈಲ್ ಟವರ್ ಲೊಕೇಶನ್ ಆಧಾರಿಸಿ ಆತನನ್ನು ಹುಡಕಾಟ ನಡೆಸಲಾಗುತ್ತಿದೆ. ಕೋಲಾರ ನಗರ ಠಾಣಾ ಪೊಲೀಸರು ಹಾಗೂ ಆರೋಗ್ಯ ಇಲಾಖೆಗೆ ಇದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಆರೋಗ್ಯ ಇಲಾಖೆ ಕಣ್ಣು ತಪ್ಪಿಸಿ ಹೋಗಿರುವ ವ್ಯಕ್ತಿ ಎಲ್ಲೆಲ್ಲಿ ಓಡಾಡ್ತಾನೋ..? ಯಾರಿಗೆ ಸೋಂಕು ಹರಡುತ್ತಾನೋ ಎನ್ನುವ ಭಯ ಸದ್ಯ ಕೋಲಾರದಲ್ಲಿ ಶುರುವಾಗಿದೆ.