ಕೋಲಾರ: ರಾಜ್ಯದಲ್ಲಿ ನಡೆದ ಅಕ್ರಮ ಜಿಲಿಟನ್ ಸ್ಫೋಟ ಪ್ರಕರಣಗಳ ನಂತರ ಎಚ್ಚೆತ್ತಿರುವ ಗಣಿ ಇಲಾಖೆ, ರಾಜ್ಯದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಇಂದು ಜಿಲ್ಲೆಯಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡಲು ಮುಂದಾಗಿದ್ದವರ ಮೇಲೆ ದಾಳಿ ಮಾಡಿದ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದವರ ಹೆಡಮುರಿ ಕಟ್ಟಿದೆ.
ರಾಜ್ಯದಲ್ಲಿ ಗಣಿಗಾರಿಕೆ ಹಾಗೂ ಬ್ಲಾಸ್ಟಿಂಗ್ ಮಾಡುವ ಮೊದಲು ಡೈರೆಕ್ಟರ್ ಜನರಲ್ ಮೈನ್ಸ್ ಸೇಪ್ಟಿ ಅವರಿಂದ ಅನುಮತಿ ಪಡೆದು ನಂತರದಲ್ಲಿ ಬ್ಲಾಸ್ಟಿಂಗ್ ಮಾಡಲು ಆದೇಶ ಮಾಡಲಾಗಿದೆ. ಆದ್ರೆ ಜಿಲ್ಲೆಯ ಮಾಲೂರು ತಾಲೂಕಿನ ಆನಿಮಿಟ್ಟನಹಳ್ಳಿ ಗ್ರಾಮದ ಬಳಿ ಜಿಲ್ಲಾಪಂಚಾಯಿತಿ ಸದಸ್ಯೆ ಗೀತಾ ಅವರ ಪತಿ ವೆಂಕಟೇಶ್ಗೌಡ ಎಂಬುವವರ ಒಡೆತನದ ವೆಂಕಟೇಶ್ವರ ಸ್ಟೋನ್ ಕ್ರಷರ್ನಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡಲು ತಯಾರಿ ನಡೆಸಲಾಗುತ್ತಿತ್ತು.
ಅಕ್ರಮ ಗಣಿಗಾರಿಕೆ ಸ್ಫೋಟಕ್ಕೆ ತಯಾರಿ ನಡೆಸಿದ್ದ ಆರೋಪಿಗಳ ಬಂಧನ ಬ್ಲಾಸ್ಟಿಂಗ್ ಮಾಡಲು ಬಂಡೆಗಳಲ್ಲಿ ಸುಮಾರು 70 ಹೋಲ್ಗಳನ್ನು ಮಾಡಿ ಅದರಲ್ಲಿ ಜಿಲಿಟನ್ ಹಾಗೂ ಮೋನಿಯನ್ ತುಂಬಿ ಸಿದ್ದಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ತಂಡ ನಾಲ್ವರನ್ನು ಬಂಧಿಸಿದ್ದಾರೆ. ಇನ್ನೂ ಕ್ರಷರ್ ಮಾಲೀಕ ವೆಂಕಟೇಶ್ಗೌಡ ತಲೆಮರೆಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಜಿಲಿಟನ್ ಸ್ಫೋಟ ಪ್ರಕರಣದ ನಂತರ ಕಲ್ಲುಗಣಿಗಾರಿಕೆ ಸ್ಫೋಟಕ್ಕೂ ಮೊದಲು ಡೈರೆಕ್ಟರ್ ಜನರಲ್ ಮೈನ್ಸ್ ಸೇಪ್ಟಿ ಇಲಾಖೆಯಿಂದ ಅನುಮತಿ ಪಡೆಯಬೇಕು. ಬ್ಲಾಸ್ಟಿಂಗ್ ಮಾಡುವ ಮೊದಲು ಅಗತ್ಯ ತಾಂತ್ರಿಕ ಸಿಬ್ಬಂದಿ ನೇಮಕ ಹಾಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹಾಗಾಗಿ ಅನುಮತಿ ಪಡೆಯುವವರೆಗೂ ಜಿಲ್ಲೆಯಲ್ಲಿ ಬ್ಲಾಸ್ಟಿಂಗ್ ಮಾಡದಂತೆ ಜಿಲ್ಲಾಡಳಿತ ಜಿಲ್ಲೆಯ ಎಲ್ಲ ಗಣಿ ಮಾಲೀಕರಿಗೂ ನೋಟಿಸ್ ನೀಡಿತ್ತು.
ಹೀಗಿದ್ದರು ಇಂದು ಆನಿಮಿಟ್ಟನಹಳ್ಳಿ ವೆಂಕಟೇಶ್ವರ ಸ್ಟೋನ್ ಕ್ರಷರ್ನಲ್ಲಿ ಬ್ಲಾಸ್ಟಿಂಗ್ಗೆ ಮುಂದಾದಾಗ ದಾಳಿ ಮಾಡಿ ಬ್ಲಾಸ್ಟಿಂಗ್ ತಡೆಯಲಾಗಿದೆ. ಈ ವೇಳೆ, ಜಿಲ್ಲಾಧಿಕಾರಿ ಸೆಲ್ವಮಣಿ ಹಾಗೂ ಎಸ್ಪಿ ಕಾರ್ತಿಕ್ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಅಕ್ರಮ ಸ್ಫೋಟಕ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಜೊತೆಗೆ ಮತ್ತೆ ಜಿಲ್ಲೆಯಲ್ಲಿ ಕೆಲವೆಡೆ ರಾತ್ರಿ ವೇಳೆ ಬ್ಲಾಸ್ಟಿಂಗ್ ಮಾಡುವ ಮಾಹಿತಿ ಇದ್ದು ಬಗ್ಗೆಯೂ ದಾಳಿ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.