ಕೋಲಾರದಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ನಾಯಕರು. ಕೋಲಾರ : ನಾನು ಜೆಡಿಎಸ್ ನೊಂದಿಗೆ ಶಾಮೀಲಾಗಿರುವ ಕುರಿತು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪ ಮಾಡಿದ್ದಾರೆ. ಇದನ್ನು ಸಾಬೀತುಪಡಿಸಿದರೆ ಬಂಗಾರಪೇಟೆ ಪಟ್ಟಣದ ಕುವೆಂಪು ವೃತ್ತದಲ್ಲಿ ನೇಣು ಹಾಕಿಕೊಂಡು ಸಾಯುವೆ ಎಂದು ಪರಾಜಿತ ಬಂಗಾರಪೇಟೆ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಸವಾಲು ಹಾಕಿದರು.
ಕೋಲಾರದ ಪತ್ರಕರ್ತರ ಭವನದದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜೆಡಿಎಸ್ ಪಕ್ಷದೊಂದಿಗೆ ಹೋಟೆಲ್ನಲ್ಲಿ ಡೀಲ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆರೋಪ ಸಾಬೀತು ಪಡಿಸಿದರೆ ನಾನು ನೇಣು ಹಾಕಿಕೊಂಡು ಸಾಯಿವೆ. ಇಲ್ಲದಿದ್ದಲ್ಲಿ ಅವರೇನು ಮಾಡುತ್ತಾರೆಂದು ಬಹಿರಂಗ ಪಡಿಸಬೇಕು. ಈ ಬಗ್ಗೆ ನಾನು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸಿದ್ದು, ಅವರಿಗೆ ನೋಟಿಸ್ ಕಳಿಸುವ ಮೂಲಕ ಕಾನೂನು ಹೋರಾಟ ಮಾಡುವುದಾಗಿ ಎಂ.ನಾರಾಯಣಸ್ವಾಮಿ ಹೇಳಿದರು.
ಇನ್ನು ಶಾಸಕ ಎಸ್.ಎನ್ ನಾರಾಯಣಸ್ವಾಮಿ ತಮ್ಮ ಮೇಲೆ ನಡೆದಿರುವ ಐಟಿ ಇಡಿ ದಾಳಿ ಮುಚ್ಚಿ ಹಾಕುವ ಸಲುವಾಗಿ ನನ್ನ ಮೇಲೆ ಆರೋಪ ಮಾಡಿದ್ದು, ನಾನು ಈಗಾಗಲೇ ಚುನಾವಣಾ ಕಣದಿಂದ ಹಿಂದೆ ಸರಿಯಲು ಸಂಪನ್ಮೂಲ ಕೊರತೆ ಎಂದು ಹೇಳಿದ್ದೇನೆ. ಹೀಗಾಗಿ ಕ್ಷೇತ್ರದ ಜನತೆಯ ದೃಷ್ಟಿಯಲ್ಲಿ ಖಳನಾಯಕನಾಗಿದ್ದೇನೆ. ಮನೆ ದೇವರ ಸಾಕ್ಷಿ, ಆತ್ಮ ಸಾಕ್ಷಿಯಾಗಿ ಹಾಗೆ ಮಾಡಿಲ್ಲ. ಇದು ನನ್ನ ಸ್ವಯಂಕೃತ ಅಪರಾಧವಾಗಿದ್ದು. ನಾನು ಯಾವ ಪಕ್ಷದ ಜೊತೆ ಕೈ ಜೋಡಿಸಿಲ್ಲ.
ನನಗೆ ಯಾರ್ಯಾರು ತೊಂದರೆ ಮಾಡಿದರು, ಮೋಸ ಮಾಡಿದ್ದರು ಎಂದು ಜನರಿಗೆ ತಿಳಿಯುತ್ತದೆ. ಅದೇ ಜನರ ಎದುರು ನಾನು ಒಳ್ಳೆಯವನಾಗುವ ಸಮಯ ಸಮೀಪವಿದ್ದು, ಕ್ಷೇತ್ರದ ಜನತೆಯಲ್ಲಿ ಕೈ ಮುಗಿದು ಹೇಳುವೆ ತಲೆ ತಗ್ಗಿಸುವಂತಹ ಕೆಲಸ ನಾನು ಯಾವತ್ತೂ ಮಾಡಿಲ್ಲವೆಂದು ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಎಂ.ನಾರಾಯಣಸ್ವಾಮಿ ಸ್ಪಷ್ಟೀಕರಣ ನೀಡಿದರು.
ಬಿಜೆಪಿಯ ಸ್ವಯಂಕೃತ ಅಪರಾಧಗಳಿಂದ ಸೋತಿದೆ : ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ತಮ್ಮದೇ ತಪ್ಪುಗಳು ಕಾರಣಗಳು ಎಂದು ಸೋಲಿನ ಪರಾಮರ್ಶೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮಾಡಿಕೊಂಡರು. ಇಂದು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನ ನಡೆಸಿದ ಅವರು, ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಬಿಜೆಪಿಯ ಸ್ವಯಂಕೃತ ಅಪರಾಧಗಳಿಂದ ಸೋತಿರುವುದಾಗಿ ಹೇಳಿದರು. ಇನ್ನು ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಪಡೆದುಕೊಂಡಿರುವ ಮತಗಳಿಗಿಂತ, ಬಿಜೆಪಿ ಅಭ್ಯರ್ಥಿ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಪಡೆದುಕೊಂಡಿರುವ ಮತಗಳೇ ಹೆಚ್ಚು ಎಂದರು.
ಈ ಮೂಲಕ ಮಾಲೂರು ವಿಧಾನ ಸಭಾ ಕ್ಷೇತ್ರದಲ್ಲಿನ ಮತದಾರರು ಬಿಜೆಪಿಯ ಪರವಾಗಿದ್ದಾರೆ. ಕೆಜಿಎಫ್ ವಿಧಾನ ಸಭಾ ಕ್ಷೇತ್ರದಲ್ಲಿ ಹಣದ ಹೊಳೆ ಹರಿಸಿರುವ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಗೆಲುವನ್ನ ಸಾಧಿಸಿದ್ದಾರೆ. ಜೊತೆಗೆ ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಟ್ರಾಂಗ್ ಆಗಿದ್ದು, ಕೊನೆ ಭಾಗದಲ್ಲಿ ಕೆಲ ಗೊಂದಲಗಳಿಂದಾಗಿ ಸೋತಿರುವುದಾಗಿ ವೇಣುಗೋಪಾಲ್ ಹೇಳಿದರು.
ಇನ್ನು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಮುದಾಯದ ಮತಗಳು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಹೋದ ಪರಿಣಾಮ ಬಿಜೆಪಿ ಸೋಲು ಕಂಡಿರುವುದಕ್ಕೆ ಕಾರಣವಾಗಿದೆ. ಅಲ್ಲದೇ ಕೋಲಾರ ಜಿಲ್ಲೆಯಲ್ಲಿ ವಾಸ್ತವಾಂಶ ಏನೇ ಇದ್ದರೂ ಜನತೆ ಕೊಟ್ಟಿರುವ ತೀರ್ಪಿಗೆ ಬದ್ದರಾಗಿದ್ದೇವೆ. ಇದೀಗ ಗೆದ್ದಿರುವ ಶಾಸಕರಿಗೆ ಬೆಂಬಲ ನೀಡುತ್ತಿದ್ದು, ನಾವು ವಿರೋಧ ಪಕ್ಷದಲ್ಲಿ ಇದ್ದು ನಮ್ಮ ಕರ್ತವ್ಯ ನಾವು ನಿಭಾಯಿಸುತ್ತೇವೆ. ಜೊತೆಗೆ ಚುನಾವಣೆಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಇದನ್ನೂ ಓದಿ :ಕಾಂಗ್ರೆಸ್ ಅಧಿಕಾರ ಹಂಚಿಕೆ 30-30 ಸೂತ್ರ: ಈ ಬಗ್ಗೆ ಶಾಸಕ ಬಾಲಕೃಷ್ಣ ಹೇಳಿದ್ದಿಷ್ಟು!