ಕೋಲಾರ :ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ದರೋಡೆಕೋರರು, ಮನೆಯಲ್ಲಿದ್ದ 43 ಲಕ್ಷ ನಗದು ಹಾಗೂ 250 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಸಂಪಂಗೆರೆ ಗ್ರಾಮದಲ್ಲಿ ನಡೆದಿದೆ. ಸಂಪಂಗೆರೆ ಗ್ರಾಮದ ನಿವಾಸಿ ಮಂಜುನಾಥ್ ಎಂಬುವರ ಮನೆಯಲ್ಲಿ ದರೋಡೆ ನಡೆದಿದೆ.
ಕಳೆದ ರಾತ್ರಿ ಮನೆಯಲ್ಲಿ ಮಂಜುನಾಥ್ ಅವರ ಪತ್ನಿ ಮಮತಾ ಅವರು ಒಬ್ಬರೇ ಮನೆಯಲ್ಲಿದ್ದರು. ಈ ವೇಳೆ, ಯಾರೂ ಇಲ್ಲದಿರುವುದನ್ನು ಗಮನಿಸಿರುವ ದರೋಡೆಕೋರರು, ಮದುವೆ ಆಹ್ವಾನ ಪತ್ರಿಕೆಯನ್ನು ನೀಡುವ ನೆಪದಲ್ಲಿ ಮನೆಗೆ ಬಂದಿದ್ದಾರೆ. ಮನೆಯಲ್ಲಿದ್ದ ಮಹಿಳೆ ವಿಳಾಸ ಪರಿಚಯ ಕೇಳುವ ಸಂದರ್ಭದಲ್ಲಿ ಆಕೆಗೆ ಪ್ರಜ್ಞೆ ತಪ್ಪುವ ಸ್ಪ್ರೇ ಮಾಡಿ ಮನೆಯಲ್ಲಿದ್ದ ಹಣ ಒಡವೆ ದೋಚಿ ಪರಾರಿಯಾಗಿದ್ದಾರೆ.