ಬೆಂಗಳೂರು :ಕೋಲಾರ ಜಿಲ್ಲೆಯ ದೊಡ್ಡ ಇಯ್ಯೂರು ಗ್ರಾಮದ ‘ದೇವರಬಂಡೆ’ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್, ಗಣಿಗಾರಿಕೆಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಸ್ಥಳದಲ್ಲಿ ಆರ್.ಕೆ. ಗ್ರಾನೈಟ್ಸ್‌ಗೆ ಕಲ್ಲು ಗಣಿಗಾರಿಕೆ ನಡೆಸಲು ಪರವಾನಗಿ ನೀಡಿರುವ ಸರ್ಕಾರದ ಆದೇಶ ಪ್ರಶ್ನಿಸಿ ಅಂಜನಾದ್ರಿ ಪರಿಸರ ಹಿತರಕ್ಷಣಾ ಸಮಿತಿ ಹಾಗೂ ಸ್ಥಳೀಯ ಗ್ರಾಮಸ್ಥರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ದೇವರಬಂಡೆ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಸುವುದಕ್ಕೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿತು.
ಅಲ್ಲದೆ, ಪರಿಸರ ಮತ್ತು ಅರಣ್ಯ ಸಚಿವಾಲಯ, ಮುಖ್ಯ ಕಾರ್ಯದರ್ಶಿ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ಕೋಲಾರ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.
ಇದಕ್ಕೂ ಮುನ್ನ ಅರ್ಜಿ ಪರಿಶೀಲಿಸಿದ ಪೀಠ, ಕೋಲಾರದ ಗುಡ್ಡಗಳು ವಿಶಿಷ್ಟ ಸೌಂದರ್ಯ ಹೊಂದಿವೆ. ಇಂತಹ ಗುಡ್ಡಗಳನ್ನು ಬೇರೆಲ್ಲೂ ಕಂಡಿಲ್ಲ. ಗುಡ್ಡ ನಾಶಪಡಿಸಿದರೆ ಮುಂದಿನ ಜನಾಂಗಕ್ಕೆ ಉಳಿಸುವುದೇನು. ಮುಂದಿನ ಜನಾಂಗಕ್ಕೆ ಅರಣ್ಯ, ಗುಡ್ಡಗಳು ಹಾಗೂ ಪ್ರಾಣಿಗಳು ವರ್ಗವನ್ನು ಉಳಿಸುವುದು ಬೇಡವೇ? ಎಂದು ಪ್ರಶ್ನಿಸಿದ ಪೀಠ, ಗಣಿಗಾರಿಕೆಯಿಂದ ಮುಂದಿನ ದಿನಗಳಲ್ಲಿ ಬೆಟ್ಟಗಳು ನಾಶವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿತು.