ಕೋಲಾರ: ಚುನಾವಣೆಯಲ್ಲಿನ ಸ್ಪರ್ಧೆಯ ವಿಚಾರ ನಿರ್ಧಾರ ಮಾಡೋಕೆ ನಾನು ಎಐಸಿಸಿ ಅಧ್ಯಕ್ಷನಲ್ಲ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಸ್ಪರ್ಧೆಯನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸ್ಪರ್ಧೆ ವಿಚಾರ ನಿರ್ಧಾರ ಮಾಡೋಕೆ ನಾನು ಎಐಸಿಸಿ ಅಧ್ಯಕ್ಷನಲ್ಲ, ನನಗೂ ಶ್ರೀನಿವಾಸಪುರಕ್ಕೆ ಬಂದು ಸ್ಪರ್ಧೆ ಮಾಡಿ ಎಂದು ಜನರು ಮನವಿ ಮಾಡುತ್ತಾರೆ. ಆದರೆ ಆ ರೀತಿ ನಡೆಯೋದಿಲ್ಲ. ಕಾಂಗ್ರೆಸ್ನ ರೀತಿ, ರಿವಾಜುಗಳಂತೆ ಎಲ್ಲ ನಿರ್ಧಾರವಾಗುತ್ತದೆ. ಪಕ್ಷಕ್ಕೆ ಎಲ್ಲರೂ ಅರ್ಜಿ ಸಲ್ಲಿಸಬೇಕಾಗುತ್ತದೆ. ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರ ಸ್ಪರ್ಧೆಯನ್ನು ಕಾಂಗ್ರೆಸ್ ಹೈ ಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಕೋಲಾರ ಪ್ರವಾಸ: ಬರುವ ನ.13 ರಂದು ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಸಂಪ್ರದಾಯದಂತೆ ದೇಗುಲ, ದರ್ಗಾ, ಚರ್ಚ್‌ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.