ಕೋಲಾರ:ಮತದಾರ ಮಾಹಿತಿ ಅಕ್ರಮ ಸಂಗ್ರಹ ಮಾಡುತ್ತಿರುವುದರ ಕುರಿತು ಸರ್ಕಾರ ಹಾರಿಕೆ ಉತ್ತರ ನೀಡುತ್ತಿದ್ದು, ಇದೊಂದು ವ್ಯವಸ್ಥಿತ ಸಂಚು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಇಂದು ಕೋಲಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ರಥಯಾತ್ರೆ ಕಾರ್ಯಕ್ರಮದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಈ ಆರೋಪ ಮಾಡಿದ್ದಾರೆ.
ಅಲ್ಲದೇ ಬಿಜೆಪಿ ಕುತಂತ್ರದ ರಾಜಕಾರಣ ಮಾಡುತ್ತಿದ್ದು, ಸಮಾಜ ಹಾಗೂ ದೇಶವನ್ನ ಒಡೆಯುವಂತಹ ಕೆಲಸ ಮಾಡುತ್ತಿದೆ. ಇನ್ನು ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತಿದೆ. ಬಿಜೆಪಿ ಕುತಂತ್ರದ ರಾಜಕಾರಣದಿಂದ ಚುನಾವಣೆ ಗೆಲ್ಲಬಹುದು ಎಂಬ ನಿಟ್ಟಿನಲ್ಲಿ ಅಧಿಕಾರವನ್ನ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇಂದೊಂದು ಹೇಯ ಕೃತ್ಯ ಎಂದು ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ತನಿಖೆ ಮೇಲೆ ವಿಶ್ವಾಸವಿಲ್ಲ:ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿದಾಗ, ಸಚಿವರೊಬ್ಬರಿಗೆ ಸೇರಿದ ಚೆಕ್ ಗಳು ಸಿಕ್ಕಿವೆ, ಹೀಗಿರುವಾಗ ಮಂತ್ರಿಯನ್ನ ಇಟ್ಟುಕೊಂಡು ಇವರು ಯಾವ ತನಿಖೆ ಮಾಡುತ್ತಾರೆ. ಅವರ ತನಿಖೆ ಮೇಲೆ ವಿಶ್ವಾಸ ಇಲ್ಲ ಎಂದು ಹೇಳಿದರು. ಇನ್ನು ಜನರ ವಿಶ್ವಾಸ ಗಳಿಸಬೇಕಾದರೆ ಆ ಮಂತ್ರಿಯನ್ನ ವಜಾ ಮಾಡಿ ಇಲ್ಲವಾದರೆ ಕಾಟಚಾರದ ತನಿಖೆ ಮಾಡಿ ಪ್ರಕರಣ ಮುಚ್ಚಿ ಹಾಕುತ್ತಾರೆ ಎಂದು ದೂರಿದರು.
ಅಲ್ಲದೆ ಚುನಾವಣಾ ಆಯೋಗ ತಮ್ಮದೆ ಆದ ಸ್ವತಂತ್ರ ಸಂಸ್ಥೆ ಇದ್ದು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬುಡಮೇಲು ಮಾಡಲು ಹೊರಟಿರುವ ದುಷ್ಟ ಶಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದರು.