ಕೋಲಾರ: ಸಂಸದ ಮತ್ತು ಶಾಸಕರೊಬ್ಬರ ನಡುವೆ ಅಕ್ರಮ ಗಣಿಗಾರಿಕೆ ವಿಚಾರವಾಗಿ ಒಂದು ವರ್ಷದಿಂದ ನಿರಂತರವಾಗಿ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಆದರೆ, ಇಂದು ಗಣಿ ಸಚಿವರು ಬೇಟಿ ನೀಡಿದ್ದೇ ತಡ ಸಚಿವರ ಎದುರಲ್ಲೇ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಸ್ಫೋಟಗೊಂಡು ಜಟಾಪಟಿಗೆ ವೇದಿಕೆಯಾಗಿಯಿತು.
ಹೌದು, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೀಕಲ್ ಹೋಬಳಿ ಸುತ್ತ - ಮುತ್ತ ಅಕ್ರಮ ಗಣಿಗಾರಿಕೆ ಬಗ್ಗೆ ದೂರುಗಳು ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಇಂದು ಕೋಲಾರದ ಟೀಕಲ್ ಹಾಗೂ ಸುತ್ತ ಮುತ್ತಲ ಪ್ರದೇಶಗಳಿಗೆ ಆಗಮಿಸಿ ಗಣಿ ಪ್ರದೇಶಗಳನ್ನು ಪರಿಶೀಲನೆ ನಡೆಸಿದರು. ಪ್ರಮುಖವಾಗಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಒಡೆತನದ ಕ್ರಶರ್ಗೂ ಭೇಟಿ ನೀಡಿದರು. ಈ ವೇಳೆ, ಸಂಸದ ಮತ್ತು ಶಾಸಕರ ನಡುವೆ ಇದ್ದ ಮುಸುಗಿನ ಗುದ್ದಾಟ ಸಚಿವ ಸಿಸಿ ಪಾಟೀಲ್ ಎದುರೇ ಸ್ಫೋಟಗೊಂಡಿತು.
ಶಾಸಕ ನಂಜೇಗೌಡ ಅವರು, ವೈಯಕ್ತಿಕ ವಿಷಯಗಳು ಬೇಡ, ಇಲ್ಲಿ ಗುಂಡು ತೋಪು ಅದು ಇದು ಇಲ್ಲ, ಎಲ್ಲವೂ ಕ್ರಮಬದ್ಧವಾಗಿದೆ ಎಂದು ಸಂಸದರ ಮೇಲೆ ಕಿಡಿಕಾರಿದರು. ಈ ಸಂದರ್ಭದಲ್ಲಿ ಸಚಿವರೇ ಮಧ್ಯೆ ಪ್ರವೇಶ ಮಾಡಿ ಇಬ್ಬರನ್ನೂ ಸಮಾಧಾನ ಮಾಡಿಸಿದರು.
ಸಚಿವರ ಮುಂದೆ ಸ್ಫೋಟಗೊಂಡ ಸಂಸದ -ಶಾಸಕರ ಮುಸುಕಿನ ಗುದ್ದಾಟ ನಂತರ ಮಾತನಾಡಿದ ಸಚಿವರು, ನಾನು ಕೋಲಾರ ಜಿಲ್ಲೆ ಒಂದಕ್ಕೆ ಭೇಟಿ ನೀಡಿಲ್ಲ. ಈ ಮೊದಲು ಚಾಮರಾಜನಗರ, ಮೈಸೂರು, ಮಂಡ್ಯ ಹಲವೆಡೆ ಭೇಟಿ ನೀಡಿದ್ದೇನೆ. ಈ ಭೇಟಿ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದರು.
ಶಾಸಕ ನಂಜೇಗೌಡ ಮಾತನಾಡಿ, ಸಂಸದರು ವೈಯಕ್ತಿಕ ವಿಚಾರಗಳನ್ನು ಹಿಡಿದುಕೊಂಡು ನಮ್ಮನ್ನು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಕ್ರಷರ್ ಕಾನೂನು ಬದ್ಧವಾಗಿದೆ. ಉದ್ದೇಶ ಪೂರ್ವಕವಾಗಿ ಸಚಿವರನ್ನು ನಮ್ಮ ಕ್ರಷರ್ಗೆ ಕರೆ ತಂದಿದ್ದಾರೆ. ಸಚಿವರು ಭೇಟಿ ನೀಡಿದ್ದು ಹಾಗೂ ಕ್ರಷರ್ ಮಾಲೀಕರ ಸಂಕಷ್ಟ ಆಲಿಸಿದ್ದು ಸಂತಸದ ವಿಷಯ. ಆದ್ರೆ, ಇದರಲ್ಲಿ ರಾಜಕೀಯ ಬೆರೆಸಲು ಸಂಸದರು ಮುಂದಾಗಿರೋದು ಸರಿಯಲ್ಲ ಇದನ್ನು ಸಹಿಸೋದಿಲ್ಲ ಎಂದರು.
ಇದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ಸಂಸದ ಮುನಿಸ್ವಾಮಿ, ಇದು ಗಣಿ ಇಲಾಖೆಯ ಕಾರ್ಯಕ್ರಮ. ಎಲ್ಲೆಲ್ಲಿ ಭೇಟಿ ನೀಡಬೇಕು ಅನ್ನೋದನ್ನ ಇಲಾಖೆ ಅಧಿಕಾರಿಗಳು ನಿಗದಿ ಪಡಿಸಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲ. ಶಾಸಕರು ತಪ್ಪು ಮಾಡಿಲ್ಲ ಅಂದ್ರೆ ಭಯಪಡುವ ಅಗತ್ಯವಿಲ್ಲ. ಉಪ್ಪು ತಿಂದವರು ಮಾತ್ರ ನೀರು ಕುಡಿಯುತ್ತಾರೆ. ಈ ಬಗ್ಗೆ ಮುಂದಿನ ಚುನಾವಣೆಯಲ್ಲಿ ಜನರು ತೀರ್ಮಾನ ಮಾಡ್ತಾರೆ ಎಂದು ತಿರುಗೇಟು ನೀಡಿದರು.