ಕೋಲಾರ :ಅದೊಂದು ನಿರ್ಜನ ಅರಣ್ಯ ಪ್ರದೇಶದಲ್ಲಿ ಮಹಿಳೆಯೊಬ್ಬರ ಅರೆಬೆಂದ ಸ್ಥಿತಿಯಲ್ಲಿರುವ ಶವವೊಂದು ಪತ್ತೆಯಾಗಿತ್ತು. ಮಹಿಳೆಯ ಕಾಲು ಬಿಟ್ಟರೆ ಆ ಇಡೀ ದೇಹವೆಲ್ಲಾ ಸುಟ್ಟು ಕರಕಲಾಗಿ ಹೋಗಿತ್ತು. ಆದರೂ ಪೊಲೀಸರ ಸಮಯ ಪ್ರಜ್ಞೆ ಹಾಗೂ ಮಿಂಚಿನ ಕಾರ್ಯಾಚರಣೆಯಿಂದ ಮಹಿಳೆಯ ಗುರುತು ಪತ್ತೆಯ ಜೊತೆಗೆ ಕೇವಲ ಒಂದೇ ಗಂಟೆಯಲ್ಲಿ ಆರೋಪಿಗಳು ಅಂದರ್ ಆಗಿದ್ದಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಾಯಕರಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಶವದ ಗುರುತು ಪತ್ತೆಯಾಗಿಲ್ಲ.
ಈ ವೇಳೆ ಎಸ್ಪಿ ನಾರಾಯಣ್ ಮಹಿಳೆಯೊಬ್ಬರ ಶವ ಸುಟ್ಟುಹಾಕಿರುವ ಕುರಿತು ಮಾಹಿತಿ ಬಂದ ಕೂಡಲೇ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬಳ ನಾಪತ್ತೆ ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಶ್ರೀನಿವಾಸಪುರದಲ್ಲಿ ನಾಪತ್ತೆಯಾಗಿದ್ದ ಮಹಿಳೆಯೇ ಇಲ್ಲಿ ಕೊಲೆಯಾಗಿರುವ ಅನುಮಾನ ದಟ್ಟವಾದ ಹಿನ್ನೆಲೆ ಮೊಬೈಲ್ ಹಾಗೂ ಶವದ ಗುರುತು ಪತ್ತೆ ಮಾಡಲಾಗಿ ಶ್ರೀನಿವಾಸಪುರದಲ್ಲಿ ಕಾಣಿಯಾಗಿದ್ದ ಮಹಿಳೆಯೇ ಇಲ್ಲಿ ಕೊಲೆಯಾಗಿರುವುದು ಖಚಿತವಾಗುತ್ತದೆ.
ಒಂದೇ ಗಂಟೆಯಲ್ಲಿ ಪ್ರಕರಣ ಬಯಲು : ಕೂಡಲೇ ಮಾಹಿತಿ ಪಡೆದ ಪೊಲೀಸರು ತಕ್ಷಣ ಕೊಲೆಯಾಗಿದ್ದ ಮಹಿಳೆಯ ಸಂಬಂಧಿಕರನ್ನು ವಿಚಾರಣೆ ನಡೆಸಿದಾಗ ಕೊಲೆಯಾದ ಮಹಿಳೆ ಶೋಭಾ ಅನ್ನೋದು ತಿಳಿದು ಬಂದಿತ್ತು. ನಂತರ ಆಕೆಯ ಮೊಬೈಲ್ ಟವರ್ ಲೊಕೇಶನ್ ಹಾಗೂ ಅವರು ನಿನ್ನೆ ಯಾರೊಂದಿಗೆ ಇದ್ದರು ಅನ್ನೋದನ್ನು ವಿಚಾರಣೆ ನಡೆಸಿದಾಗ ಆಕೆಯ ಸ್ನೇಹಿತ ರಮೇಶ್ ಅನ್ನೋದು ತಿಳಿದು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ರಮೇಶ್ನನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆಗ ಇಡೀ ಪ್ರಕರಣ ಕೇವಲ ಒಂದೇ ಗಂಟೆಯಲ್ಲಿ ಬಯಲಾಗಿದೆ.
ಇನ್ನು ಕೊಲೆಯಾದ ಮಹಿಳೆ ಶೋಭಾ ಶ್ರೀನಿವಾಸಪುರದ ಲಕ್ಷ್ಮೀ ಪ್ರಿಯಾ ಹರ್ಬಲ್ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಈಕೆಗೆ ಮೊದಲ ಪತಿ ಮೃತಪಟ್ಟಿದ್ದು, ಈಗ ಎರಡನೇ ಪತಿ ವೆಂಕಟರಾಮ್ ಎಂಬುವವರ ಜೊತೆಗೆ ಶ್ರೀನಿವಾಸಪುರದಲ್ಲಿ ವಾಸ ಮಾಡುತ್ತಿದ್ದರು. ತನ್ನಿಬ್ಬರು ಮಕ್ಕಳನ್ನು ಓದಿಸುತ್ತಾ, ತಾನು ಬ್ಯೂಟಿಪಾರ್ಲರ್, ರೈತ ಸಂಘಟನೆ, ಮಹಿಳಾ ಸಂಘಟನೆ ಎಂದೆಲ್ಲಾ ಓಡಾಡುತ್ತಾ ತನ್ನ ಸ್ನೇಹಿತ ರಮೇಶ್ ಜೊತೆಗೆ ಹಣದ ವ್ಯವಹಾರದ ಜೊತೆಗೆ ಕೃಷಿ ಮಾಡಿಸುತ್ತಿದ್ದರು ಅನ್ನೋದು ಗೊತ್ತಾಗಿದೆ. ಸದ್ಯ ರಮೇಶ್ ಈಕೆಯ ಗಂಡ ವೆಂಕಟರಾಮ್ ಇಬ್ಬರೂ ಸ್ನೇಹಿತರಾಗಿದ್ದು, ರಮೇಶ್ ಜೊತೆಗೆ ಹಣದ ವ್ಯವಹಾರ ಮಾಡಿರುವ ಶಂಕೆ ಇದೆ. ಈ ವಿಚಾರದಲ್ಲಿ ಇಬ್ಬರ ನಡುವೆ ಉಂಟಾಗಿದ್ದ ವಿರಸದಿಂದಲೇ ಕೊಲೆ ಮಾಡಲಾಗಿದೆ ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಕೊಲೆಗೆ ನಿಖರ ಕಾರಣ ಪೊಲೀಸರ ತನಿಖೆಯಿಂದ ಲಭ್ಯವಾಗಬೇಕು: ಎರಡು ದಿನದ ಹಿಂದೆ ಅಂದರೆ ಭಾನುವಾರ ರಮೇಶ್ ಜೊತೆಗೆ ಸಂಬಂಧಿಕರೊಬ್ಬರ ಮದುವೆಗೂ ಹೋಗಿ ಬಂದಿದ್ದ ಶೋಭಾ ಸೋಮವಾರ ಇಡೀ ದಿನ ಪತ್ತೆಯಾಗಿರಲಿಲ್ಲ. ಈ ಸಂಬಂಧ ಶೋಭಾ ಎರಡನೇ ಪತಿ ವೆಂಕಟರಾಮ್ ಹಾಗೂ ಆಕೆಯ ಪುತ್ರ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ನಾಪತ್ತೆ ದೂರು ಸಹ ನೀಡಿದ್ದರು. ದೂರು ನೀಡಿದ್ದ ಪ್ರಕರಣ ದಾಖಲಾಗಿದ್ದ ಕೆಲವೇ ಹೊತ್ತಿಗೆ ಮಹಿಳೆ ಬರ್ಬರವಾಗಿ ಕೊಲೆಯಾಗಿರುವುದು ತಿಳಿದು ಬಂದಿದೆ. ಸದ್ಯ ಕೊಲೆ ಮಾಡಿದ ಆರೋಪಿ ರಮೇಶ್ ಸಿಕ್ಕಿದ್ದು, ಈ ಕೊಲೆಗೆ ನಿಖರ ಕಾರಣ ಕೇವಲ ಹಣದ ವ್ಯವಹಾರ ಮಾತ್ರನಾ? ಅಥವಾ ಕೊಲೆಗೆ ಯಾರೆಲ್ಲಾ ಸಹಕಾರ ನೀಡಿದ್ದರು ಅನ್ನೋದು ಪೊಲೀಸರ ವಿಚಾರಣೆಯಿಂದ ತಿಳಿದು ಬರಬೇಕಿದೆ. ಸದ್ಯ ಕೊಲೆಯಾದ ಮಹಿಳೆ ಶೋಭಾ ಸಂಬಂಧಿಕರು ಕೊಲೆ ಮಾಡಿರುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಕರಣದ ಬಗ್ಗೆ ಎಸ್ಪಿ ಹೇಳಿದ್ದಿಷ್ಟು:'ಬೆಳಗ್ಗೆ ಕೋಲಾರ ಗ್ರಾಮೀಣ ಠಾಣೆ ಬೀಟ್ ಪೊಲೀಸ್ ಅಶ್ವಿನಿಯವರಿಗೆ 7;30 8 ಗಂಟೆಯ ಹಾಗೆ ಒಂದು ಕರೆ ಬಂತು. ಜಮೀನಿನಲ್ಲಿ ಒಂದು ಮಹಿಳೆಯ ಮೃತ ದೇಹ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ. ತದನಂತರ ಅವರು ಈ ಮಾಹಿತಿಯನ್ನು ಗ್ರಾಮೀಣ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ. ಇದಾದ ನಂತರ 9;30ರ ಸಮಯಕ್ಕೆ ನನಗೆ ಯಾರೋ ಒಬ್ಬರು ಕರೆ ಮಾಡಿದ್ದರು. ಶ್ರೀನಿವಾಸಪುರದಲ್ಲಿ ಒಬ್ಬರು ಮಹಿಳೆ ಕಾಣೆಯಾಗಿದ್ದಾರೆ. ದಯವಿಟ್ಟು ನಮಗೆ ಹುಡುಕಲು ಸಹಾಯ ಮಾಡಿ ಎಂದರು. ನಾನು ತಕ್ಷಣವೇ ನಮ್ಮ ಡಿಎಸ್ಪಿಯವರಿಗೆ ಮಾಹಿತಿ ನೀಡಿದೆ. ಈತರ ಮಿಸ್ಸಿಂಗ್ ಕೇಸ್ ಏನಿದೆ ಅದನ್ನು ವಾಟ್ಸಾಪ್ ಮೂಲಕ ಕಳುಹಿಸಿದೆ. ಆಗ ಇನ್ಸ್ಪೆಕ್ಟರ್ ಲೋಕೇಶ್ ಅವರು ತಕ್ಷಣವೇ ಸ್ಪಾಟ್ಗೆ ಬಂದು ಮಿಸ್ಸಿಂಗ್ ಕೇಸ್ ಬಗ್ಗೆ ಕಾಂಟ್ಯಾಕ್ಟ್ ಮಾಡಿದ್ದಾರೆ. ನಂತರ ಗುಮಾನಿ ಮೇರೆಗೆ ಮಹಿಳೆಯ ಗಂಡನನ್ನು ಸ್ಥಳಕ್ಕೆ ಕರೆದು ದೇಹವನ್ನು ತೋರಿಸಿದಾಗ ಅವರು ದೇಹದ ಭಾಗಗಳನ್ನು ಗುರುತಿಸಿ ಆಕೆಯನ್ನು ಗುರುತಿಸಿದ್ದಾರೆ. ಹೀಗಾಗಿ ಅಪರಿಚಿತ ಮೃತದೇಹ ಎಂಬ ಗುಮಾನಿ ಹೋಗಿ ಆ ದೇಹ ಅವಳದ್ದೇ ಎಂಬುದು ಖಚಿತವಾಗಿದೆ' ಎಂದು ಎಸ್ಪಿ ನಾರಾಯಣ್ ಅವರು ತಿಳಿಸಿದ್ದಾರೆ.
ಒಟ್ಟಾರೆ ತಾನು ಒಬ್ಬಂಟಿಯಾಗಿದ್ದುಕೊಂಡು ತನ್ನ ಕಾಲ ಮೇಲೆ ತಾನು ನಿಂತು ದುಡಿದು ಬದುಕುತ್ತಿದ್ದವಳು ಇಂದು ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಸದ್ಯ ಇದು ಶ್ರೀನಿವಾಸಪುರ ಜನರನ್ನು ಬೆಚ್ಚಿಬೀಳಿಸಿದೆ. ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಸುಂದರ ಜೀವನ ನಡೆಸಬೇಕು ಎಂದುಕೊಂಡಿದ್ದಾಕೆ. ಹೀಗೆ ಗುರುತೇ ಸಿಗದ ಹಾಗೆ ಕೊಲೆಯಾಗಿದ್ದೇಕೆ? ಅನ್ನೋದು ಸದ್ಯ ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ಇದನ್ನೂ ಓದಿ :ಟ್ರಿಪ್ಗೆಂದು ಕರೆದೊಯ್ದು ಎಣ್ಣೆ ಪಾರ್ಟಿ: ರೌಡಿಶೀಟರ್ ಕೊಂದು ಶವ ಹೂತು ಹಾಕಿದ ಆರೋಪಿಗಳು