ಕೋಲಾರ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ ಯುವಕ ಮುಹೂರ್ತದ ವೇಳೆ ಪರಾರಿ ಆಗಿದ್ದಾನೆ. ಆತನ ಹುಡುಕಾಟಕ್ಕೆ ಮುಂದಾಗಿರುವ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಇವರಿಬ್ಬರ ವಿವಾಹ ಇಂದು ನಿಶ್ಚಯವಾಗಿತ್ತು. ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಪರಾರಿಯಾಗಿದ್ದು, ನಿನ್ನೆಯಿಂದ ವರನಿಗಾಗಿ ಯುವತಿ ಹುಡುಕಾಟ ನಡೆಸುತ್ತಿದ್ದಾಳೆ.
ವಿವರ: ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ರಾಜಶೇಖರ್ ದಾಸ್ ಹಾಗೂ ಈ ಯುವತಿಯ ಮದುವೆ ಇಂದು(ಆ.18) ನಿಶ್ಚಯವಾಗಿತ್ತು. ಆದರೆ, ಮದುಮಗ ನಾಪತ್ತೆಯಾಗಿದ್ದು, ಇದೀಗ ಮದುಮಗಳು ಪೊಲೀಸ್ ಠಾಣೆಯ ಮೊರೆ ಹೋಗಿದ್ದಾಳೆ.
ಕಳೆದ 6 ವರ್ಷಗಳಿಂದ ಇವರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಂದು ಹೆಬ್ಬಣಿ ಗ್ರಾಮದಲ್ಲಿರುವ ಚನ್ನಕೇಶವ ದೇವಾಲಯದಲ್ಲಿ ಮದುವೆಯನ್ನು ಹಮ್ಮಿಕೊಳ್ಳಲಾಗಿದ್ದು, ಮದುವೆಗೆ ಜಾತಿ ಅಡ್ಡಿಯಾದ ಹಿನ್ನೆಲೆ ವರ ನಾಪತ್ತೆಯಾಗಿದ್ದಾನೆ ಎನ್ನಲಾಗ್ತಿದೆ. ಲಗ್ನ ಪತ್ರಿಕೆ, ಹೊಸ ಸೀರೆಯೊಂದಿಗೆ ನ್ಯಾಯಕ್ಕಾಗಿ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಆತನನ್ನು ನಾನು ಆರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಈಗ ನನ್ನನ್ನು ಮದುವೆ ಸಹ ಆಗುತ್ತೇನೆಂದು ತಿಳಿಸಿದ್ದ. ಅದರಂತೆ ಮದುವೆಗೆ ಸಿದ್ಧವಾಗಿದ್ದೆವು. ಆದರೆ, ಆತ ಬೇರೆ ಸಂಬಂಧ ನೋಡಿಕೊಂಡು ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾಳೆ. ನಂಗಲಿ ಪೊಲೀಸ್ ಠಾಣೆ ಎದುರು ಯುವತಿಯ ಸಂಬಂಧಿಕರು ಜಮಾವಣೆಯಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ