ಕೋಲಾರ:ಕೋಲಾರದಲ್ಲಿ ಇಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾವಹಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದು, ಅವರಿಗೆ ರಾಮಸಂದ್ರ ಗಡಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿದೆ. ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕುವ ಮೂಲಕ ಮಾಲೂರು ಶಾಸಕ ನಂಜೇಗೌಡ ಅವರ ತಂಡ ಹಾಗೂ ಕಾರ್ಯಕರ್ತರು ಸ್ವಾಗತ ಕೋರಿದರು. ಸಿದ್ದರಾಮಯ್ಯ ನೇರವಾಗಿ ಕಾಂಗ್ರೆಸ್ ಕಚೇರಿಗೆ ತೆರಳಿದ್ದಾರೆ.
ಕೋಲಾರಕ್ಕೆ ಆಗಮನಕ್ಕೂ ಮುನ್ನ ಬೆಂಗಳೂರಿನ ಕೆ.ಎಚ್.ಮುನಿಯಪ್ಪ ಅವರ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ, ಕೆ.ಎಚ್.ಮುನಿಯಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅದರಂತೆ ಸಿದ್ದರಾಮಯ್ಯ ಅವರೊಂದಿಗೆ ಮುನಿಯಪ್ಪ ಅವರು ಸಹ ಕಾರಿನಲ್ಲಿಯೇ ಬಂದಿದ್ದಾರೆ. ಈ ಮೂಲಕ ಕೋಲಾರ ಕಾಂಗ್ರೆಸ್ನಲ್ಲಿರುವ ಭಿನ್ನಮತ ಶಮನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಜೊತೆಗೆ ಬಹುದಿನಗಳ ನಂತರ ರಮೇಶ್ ಕುಮಾರ್ ಹಾಗೂ ಕೆ.ಎಚ್.ಮುನಿಯಪ್ಪ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುನಿಯಪ್ಪ ಮುನಿಸಿಗೆ ಮದ್ದು!:ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಕೋಲಾರದಿಂದ ಸ್ಪರ್ಧಿಸುವ ಕುರಿತು ಕೋಲಾರದ ಕಾಂಗ್ರೆಸ್ ಕಚೇರಿಯಲ್ಲಿ ಎರಡು ಬಣಗಳ ನಡುವೆ ಒಂದು ತಿಂಗಳ ಹಿಂದೆ ಜಗಳ ನಡೆದಿತ್ತು. ಮಾಜಿ ಸಂಸದ ಕೆ ಎಚ್ ಮುನಿಯಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಏರ್ಪಡಿಸಲಾಗಿತ್ತು. ಆದರೆ ಈ ಸಭೆಗೆ ರಮೇಶ್ ಕುಮಾರ್ ಬಣದ ಕಾರ್ಯಕರ್ತರು ತಡವಾಗಿ ಬಂದಿದ್ದರು. ತಡವಾಗಿ ಬಂದವರೇ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆಗೆ ನಿಲ್ಲಬೇಕು ಎಂದು ಒತ್ತಾಯಿದ್ದಾರೆ. ಆಗ ಕಾಂಗ್ರೆಸ್ ಕಾರ್ಯಕರ್ತರು ಜೊತೆ ವಾಗ್ವಾದ ಏರ್ಪಟ್ಟಿತ್ತು. ವಾಗ್ವಾದ ಕೈ ಕೈ ಮಿಲಾಯಿಸುವವರೆಗೂ ಹೋಗಿತ್ತು. ಕೊನೆಯಲ್ಲಿ ಮುನಿಯಪ್ಪ ಅವರೇ ಕಾರ್ಯಕರ್ತರನ್ನು ಸಮಾಧಾನಗೊಳಿಸಿದ್ದರು.
ನಂತರದಲ್ಲಿ ಮಾಜಿ ಸಂಸದ ಕೆ ಎಚ್ ಮುನಿಯಪ್ಪ ಅವರು ಸಭೆ ನಡೆಸಿ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನಮ್ಮಲ್ಲೇ ಒಳಜಗಳ ನಡೆದರೆ ಚುನಾವಣೆ ಮೇಲೆ ಪರಿಣಾಮ ಬೀಳಲಿದೆ. ಇದರ ಲಾಭ ವಿರೋಧ ಪಕ್ಷಗಳಿಗೆ ಆಗುತ್ತದೆ ಎನ್ನುವ ಕಿವಿಮಾತನ್ನು ಹೇಳಿ ತಣ್ಣಗಾಗಿಸಿದ್ದರು. ಆದರೂ ಇದೀಗ ಸಿದ್ದರಾಮಯ್ಯ ಅವರೂ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ.