ಕೋಲಾರ: 22 ವರ್ಷಗಳ ನಂತರ ವಿಶ್ವಪ್ರಸಿದ್ದ ಕೆಜಿಎಫ್ ಚಿನ್ನದ ಗಣಿಯಲ್ಲಿ ಮತ್ತೆ ಚಿನ್ನ ಹೊಳೆಯುವ ಸಾಧ್ಯತೆ ಗೋಚರವಾಗುತ್ತಿದೆ. ಕೆಜಿಎಫ್ನಲ್ಲಿ ಚಿನ್ನ ತೆಗೆಯಲು ಮನಸ್ಸು ಮಾಡಿರುವ ಕೇಂದ್ರ ಸರ್ಕಾರ ಎರಡು ದಶಕಗಳ ನಂತರ ಕೆಜಿಎಫ್ ಚಿನ್ನದ ಗಣಿಯ ಬಗ್ಗೆ ಆಸಕ್ತಿ ವಹಿಸಿರುವುದು ಸಂತಸ ತಂದಿದೆ. ಆದರೆ, ಸರ್ಕಾರ ಕಾರ್ಮಿಕರ ಹಿತಾಸಕ್ತಿ ಮರೆತಿರುವುದು ಅಷ್ಟೇ ಬೇಸರ ಮೂಡಿಸಿದೆ.
ವಿಶ್ವಕ್ಕೆ ಚಿನ್ನವನ್ನು ಕೊಟ್ಟ ಹೆಗ್ಗಳಿಕೆ ಕೋಲಾರ ಜಿಲ್ಲೆಯ ಕೆಜಿಎಫ್ ಚಿನ್ನದ ಗಣಿಗೆ ಸಲ್ಲುತ್ತದೆ. ನೂರಾರು ವರ್ಷಗಳ ಕಾಲ ಕೆಜಿಎಫ್ ಚಿನ್ನದ ಬೆಳೆ ಬೆಳೆದು ವಿಶ್ವಕ್ಕೆ ಚಿನ್ನವನ್ನು ಕೊಟ್ಟಿದೆ. ಆದರೆ, 2001 ರಲ್ಲಿ ಚಿನ್ನದ ಗಣಿಗೆ ಬೀಗ ಹಾಕಿದ ನಂತರ, ಚಿನ್ನದ ಗಣಿಗೆ ಬೀಗ ಹಾಕಿದ್ದ ಸರ್ಕಾರ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಯಾವುದೇ ಪರಿಹಾರ ನೀಡದೇ ನಿವೃತ್ತಿ ಪರಿಹಾರವನ್ನೂ ನೀಡಿರಲಿಲ್ಲ.
ಸುಮಾರು 3,500 ಜನ ಕಾರ್ಮಿಕರಿಗೆ ಸುಮಾರು 52 ಕೋಟಿ ರೂಪಾಯಿ ಪರಿಹಾರ ನೀಡಬೇಕಿತ್ತು. ಯಾವುದನ್ನೂ ನೀಡದೇ ಚಿನ್ನದ ಗಣಿಗೆ ಬೀಗ ಹಾಕಿ ಸುಮ್ಮನಾಗಿತ್ತು. ಅತ್ತ ಕಾರ್ಮಿಕ ಸಂಘಟನೆಗಳು ಹತ್ತಾರು ವರ್ಷಕಾಲ ನ್ಯಾಯಕ್ಕಾಗಿ ಸರ್ಕಾರಗಳ ಬಳಿ, ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಲೇ ಇದ್ದರೆ, ಇನ್ನು ಕಾರ್ಮಿಕರಿಗೆ ಪರಿಹಾರ ಸಿಕ್ಕಿಲ್ಲ.
ಇದೆಲ್ಲದರ ನಡುವೆ ಏಕಾಏಕಿ ಸರ್ಕಾರ ಈಗ ಕೆಜಿಎಫ್ನಲ್ಲಿ ಇರುವ ಚಿನ್ನವನ್ನು ತೆಗೆದ ನಂತರ ಹೊರ ಹಾಕಿರುವ ಮಣ್ಣಿನಲ್ಲಿ ಅಂದರೆ ಕೆಜಿಎಫ್ನಲ್ಲಿರುವ 13 ಸೈನೈಡ್ ಗುಡ್ಡಗಳಲ್ಲಿ ಚಿನ್ನವನ್ನು ಮತ್ತೊಮ್ಮೆ ಶೋಧಿಸುವ ಕೆಲಸಕ್ಕೆ ಟೆಂಡರ್ ಕರೆದಿದೆ. ಕೆಜಿಎಫ್ ನಗರದ ಸುತ್ತಮುತ್ತ 13 ಸೈನೈಡ್ ಗುಡ್ಡಗಳಿದ್ದು, ಅದರಲ್ಲಿ ಸುಮಾರು 35 ಲಕ್ಷ ಮಿಲಿಯನ್ ಟನ್ ಮಣ್ಣಿದೆ ಎಂದು ಅಂದಾಜಿಸಿದೆ. ಅದರಂತೆ ಸುಮಾರು 25 ಟನ್ ಚಿನ್ನ ಸಿಗುವ ನಿರೀಕ್ಷೆ ಇದೆ. ಸದ್ಯ ಆ ಮಣ್ಣಿನಲ್ಲಿನ ಚಿನ್ನವನ್ನು ಹೊರತೆಗೆಯುವ ಕೆಲಸ ಆರಂಭಿಸಿದ್ದು, ಮೊದಲ ಹಂತದ ಟೆಂಡರ್ ಪ್ರಕ್ರಿಯೆ ಶುರುಮಾಡಿದೆ.
ಪರಿಹಾರ ನೀಡಿ ಮುಂದಿನ ಕ್ರಮ ಕೈಗೊಳ್ಳಲಿ: ಆದರೆ, ಇದು ಚಿನ್ನದ ಗಣಿ ವಿಚಾರವಾಗಿ ಸರ್ಕಾರ 22 ವರ್ಷಗಳ ನಂತರ ಒಂದೊಳ್ಳೆ ನಿರ್ಧಾರ ಮಾಡಿರೋದು ಸಂತೋಷದ ವಿಷಯವೇ ಆದರೂ, ಕೇಂದ್ರ ಸರ್ಕಾರದ ನಿಲುವಿಗೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮೊದಲು 2006 ಕೇಂದ್ರ ಸರ್ಕಾರದ ಕ್ಯಾಬಿನೆಟ್ ನಿರ್ಣಯದಂತೆ ಹಾಗೂ 2016ರ ಸುಪ್ರೀಂಕೋರ್ಟ್ ನಿರ್ದೇಶನದಂತೆ ಮೊದಲು ಇಲ್ಲಿ ಬಾಕಿ ಇರುವ ಗಣಿ ಕಾರ್ಮಿಕರ 52 ಕೋಟಿ ರೂಪಾಯಿ ಪರಿಹಾರ ನೀಡಿ ಮುಂದಿನ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿವೆ.