ಕೋಲಾರ: ಆಕೆ ಚೆನ್ನಾಗಿ ಓದಿ ಜೀವನದಲ್ಲಿ ಯಶಸ್ಸನ್ನು ಪಡೆದು ಬರುತ್ತೇನೆ ಎಂದು ಹೇಳಿ ಬೆಂಗಳೂರಿಗೆ ಹೋಗಿದ್ದ ಯುವತಿ. ಆದರೆ ಅವತ್ತು ನಡೆದ ಅದೊಂದು ದುರ್ಘಟನೆ ಆಕೆಯ ಜೀವವನ್ನೇ ಅಗ್ನಿ ಪರೀಕ್ಷೆಗೆ ತಳ್ಳಿತ್ತು. ಹದಿಮೂರು ದಿನಗಳ ಕಾಲ ಸಾವು ನಡುವಿನ ಮದ್ಯೆ ಹೋರಾಟ ಮಾಡಿದ ಯುವತಿ ಕೊನೆಗೆ ತನಗಾಗಿ ಕಾದಿದ್ದ ಹೆತ್ತವರನ್ನು ನೋಡಲು ಜೀವಂತವಾಗಿ ಹಿಂತಿರುಗಿ ಬರಲೇ ಇಲ್ಲ.
ಹೌದು, ಕಳೆದ 15 ದಿನಗಳ ಹಿಂದೆ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಎಂಎಸ್ಸಿ ಓದುತ್ತಿದ್ದ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ದಾಸರ ಹೊಸಹಳ್ಳಿ ಗ್ರಾಮದ ವಿದ್ಯಾರ್ಥಿನಿ ಶಿಲ್ಪ ಭಾನುವಾರ ಇಹಲೋಕ ತ್ಯಜಿಸಿದರು. ಕಳೆದ 13 ದಿನಗಳ ಹಿಂದೆ ಬಿಎಂಟಿಸಿ ಬಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಅವರನ್ನು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಶಿಲ್ಪ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಇನ್ನು, ಘಟನೆ ಹಿನ್ನೆಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಬಿಎಂಟಿಸಿ ಪದೇ ಪದೆ ಬೇಜವಾಬ್ದಾರಿಯಿಂದ ಹೀಗೆ ಅಮಾಯಕರ ಜೀವಗಳನ್ನು ತೆಗೆಯುತ್ತಿದೆ ಎಂದು ಆರೋಪಿಸಿ ಸಾರಿಗೆ ಸಚಿವರು ರಾಜೀನಾಮೆ ನೀಡುವಂತೆಯೂ ಆಗ್ರಹಿಸಿದ್ರು. ಆದರೆ ಯಾವ ಪ್ರತಿಭಟನೆಗೂ ಫಲ ಸಿಗದೆ ಶಿಲ್ಪ ಕೊನೆಯುಸಿರೆಳೆದಿದ್ದಾರೆ.
ಓದಿನಲ್ಲಿ ಬುದ್ಧಿವಂತೆಯಾಗಿದ್ದ ಶಿಲ್ಪ..ಕೋಲಾರದ ದಾಸರಹೊಸಹಳ್ಳಿ ಗ್ರಾಮದ ರವಿ ಕುಮಾರ್ ಹಾಗೂ ಪದ್ಮ ದಂಪತಿಗೆ ಮೂರು ಜನ ಹೆಣ್ಣುಮಕ್ಕಳು. ಶಿಲ್ಪ ಎರಡನೇ ಪುತ್ರಿ. ಚೆನ್ನಾಗಿ ಓದುತ್ತಿದ್ದ ಶಿಲ್ಪ ಗ್ರಾಮದಲ್ಲೂ ಅಚ್ಚುಮೆಚ್ಚಿನ ಮಗಳು. ಶಿಲ್ಪ ತಂದೆ ತಾಲೂಕು ರವಿ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರೆ, ತಾನು ಕೂಡಾ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು ಎಂಬ ಕನಸು ಕಂಡಿದ್ದ ಹುಡುಗಿ. ಆದರೆ ವಿಧಿಯಾಟವೇ ಬೇರೆ ಇತ್ತು. ಹತ್ತಾರು ಆಸೆಗಳನ್ನು ಹೊತ್ತು ಬೆಂಗಳೂರಿಗೆ ಹೋಗಿದ್ದ ಶಿಲ್ಪ ಜೀವಂತವಾಗಿ ಬರಲೇ ಇಲ್ಲ.