ಕೋಲಾರ : ವೇತನ ಪಾವತಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೃಷಿ ಇಲಾಖೆ ಸಿಬ್ಬಂದಿಯೇ ಇಲಾಖೆಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಖಾಸಗಿ ಕಂಪನಿ ಜೊತೆ ಶಾಮೀಲಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಡಿಜಿಟಲ್ ಸಹಿ ಬಳಸಿ ನಕಲಿ ದಾಖಲೆ ಸೃಷ್ಟಿಸಿ, ಇಲಾಖೆಯ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿದ 3 ಜನ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಕೃಷಿ ಇಲಾಖೆಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿರುವ ಆರೋಪಿಗಳು ಇಲಾಖೆಗೆ ವಂಚಿಸಿದ್ದಾರೆ.
ಸಿಬ್ಬಂದಿಯಿಂದಲೇ ಕೋಲಾರ ಕೃಷಿ ಇಲಾಖೆಗೆ ದೋಖಾ ಕೋಲಾರ ಕೃಷಿ ಇಲಾಖೆಯಲ್ಲಿ ಈ ಹಿಂದೆ ಜಂಟಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಅವರ ಡಿಜಿಟಲ್ ಸಹಿ ಬಳಸಿಕೊಂಡು, ಸುಮಾರು 40 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಕಚೇರಿಯ ನಿವೃತ್ತ ಸೂಪರಿಂಡೆಂಟ್ ಸತ್ಯನಾರಾಯಣ ಪ್ರಸಾದ್, ಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ನಯಾಜ್ ಅಹ್ಮದ್ ಹಾಗೂ ಎಂ.ಎ.ಎಂಟರ್ ಪ್ರೈಸಸ್ ಮಾಲೀಕ ಮುಹಿಬ್ ಆಜೀಮ್ನನ್ನು ಗಲ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಆಗಸ್ಟ್ 3 ರಂದು ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ನಂತರ ಜಂಟಿ ನಿರ್ದೇಶಕರಾಗಿ ಬಂದ ರೂಪಾದೇವಿ ಖರ್ಚು ವೆಚ್ಚಗಳನ್ನ ಪರಿಶೀಲಿಸಿದ ವೇಳೆ, ಲಕ್ಷಾಂತರ ರೂಪಾಯಿ ಹಣ ಖಾತೆಯಲ್ಲಿ ಮಾಯವಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ, ವೇತನ ಪಾವತಿ ನೆಪದಲ್ಲಿ ಸತ್ಯನಾರಾಯಣ ಪ್ರಸಾದ್, ಬಿಲ್, ಓಚರ್‌ಗಳನ್ನ ಸೃಷ್ಟಿಸಿ ಇಲಾಖೆಯ ಖಜಾನೆಗೆ ಕಳುಹಿಸಿರುವುದು ಗೊತ್ತಾಗಿದೆ. ಕೆಲ ಓಚರಗಳಲ್ಲಿ ಬಿಲ್‌ಗಳನ್ನ ತಿದ್ದಲಾಗಿದ್ದು, ಜೂನ್ ತಿಂಗಳು ಒಂದರಲ್ಲೇ ಹೊರಗುತ್ತಿಗೆ ನೌಕರರಿಗೆ ವೇತನ ನೀಡಲು ಬರೋಬ್ಬರಿ 16 ಲಕ್ಷ ರೂ. ಪಾವತಿಯಾಗಿರುವುದಾಗಿ ಲೆಕ್ಕ ಇತ್ತು. ಆದರೆ, ಅದಕ್ಕೆ ಸಂಬಂಧಪಟ್ಟ ದಾಖಲೆಗಳಿರಲಿಲ್ಲ. ಇದರಿಂದ ಅಕ್ರಮವಾಗಿ ಖಾಸಗಿ ಕಂಪನಿಗೆ ಹಣ ವರ್ಗಾವಣೆಯಾಗಿರುವುದು ಬಯಲಾಗಿದೆ.
ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಜಂಟಿ ನಿರ್ದೇಶಕ ಶಿವಕುಮಾರ್ ಖಾತೆಯಲ್ಲಿ ಅನುದಾನ ಬಳಕೆ ಹಾಗೂ ದೈನಂದಿನ ಕಾರ್ಯ ನಿರ್ವಹಣೆ ಉದ್ದೇಶಕ್ಕಾಗಿ ಇಲಾಖೆಯ ಹಣ ಮೀಸಲಿರಿಸಲಾಗಿತ್ತು, ಇದಕ್ಕೆ ಡಿಜಿಟಲ್ ಸಹಿ ನೀಡಲಾಗಿತ್ತು. ಇದರಲ್ಲಿ ವೇತನ ಪಾವತಿ, ದೈನಂದಿನ ಖರ್ಚುವೆಚ್ಚಗಳು ಹಾಗೂ ನಿರ್ವಹಣೆಯನ್ನ ನಿವೃತ್ತ ನೌಕರ ಸತ್ಯನಾರಾಯಣ ಪ್ರಸಾದ್ ನೋಡಿಕೊಳ್ಳುತ್ತಿದ್ದರು. ಈ ವೇಳೆ , ಮೂವರು ಸೇರಿಕೊಂಡು ಸಂಚು ಮಾಡಿ ಜೆಡಿ ಗಮನಕ್ಕೆ ಬಾರದ ರೀತಿ ಖಾಸಗಿ ಕಂಪನಿ ಎಂ.ಎ ಎಂಟರ್ ಪ್ರೈಸಸ್ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಪಾಯಿ ಹಣ ಜಮಾವಣೆ ಮಾಡಿದ್ದಾರೆ. ಹಣ ವರ್ಗಾವಣೆಯಾಗಿರುವುದಕ್ಕೆ ಸಂಬಂಧಿಸಿದ ಬಿಲ್ ಮತ್ತು ಓಚರ್ಗಳು ಜಿಲ್ಲಾ ಪಂಚಾಯತ್ ಲೆಕ್ಕ ವಿಭಾಗದಲ್ಲಿ ಸಿಕ್ಕಿದೆ. ಹಾಗಾಗಿ, ನಿಕಟಪೂರ್ವ ಜಂಟಿ ನಿರ್ದೇಶಕ ಶಿವಕುಮಾರ್ ಕೋಲಾರದ ಗಲ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಡಿಜಿಟಲ್ ಸಹಿ ಉಪಕರಣ ದುರ್ಬಳಕೆ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಇದೇ ರೀತಿ ಮೂರ್ನಾಲ್ಕು ತಿಂಗಳು ಸುಮಾರು 40 ಲಕ್ಷಕ್ಕೂ ಅಧಿಕ ಅಕ್ರಮ ನಡೆಸಿರುವ ಆರೋಪ ಕೇಳಿ ಬಂದಿದೆ. ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.