ಕೋಲಾರ:14 ವರ್ಷದ ಬಾಲಕಿಯೊಬ್ಬಳ ಮೇಲೆ ಹುಟ್ಟುಹಬ್ಬದ ದಿನವೇ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಜಿಲ್ಲೆಯ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಆರೋಪಿಗಳನ್ನು ಆನಂದ್ ಕುಮಾರ್, ಕಾಂತರಾಜು, ಪ್ರವೀಣ್ ಮತ್ತು ವೇಣು ಎಂದು ಗುರುತಿಸಲಾಗಿದೆ. ಇವರಲ್ಲಿ ಮೂವರು ಮೇಸ್ತ್ರಿಗಳು ಮತ್ತು ಓರ್ವ ಬಸ್ ಚಾಲಕನಾಗಿದ್ದಾನೆ.
9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯು ಪೋಷಕರು ತನಗೆ ಹೊಸ ಬಟ್ಟೆ ಮತ್ತು ಚಾಕೊಲೇಟ್ ಕೊಡಿಸಲಿಲ್ಲ ಎಂಬ ಕೋಪಕ್ಕೆ ಶಾಲೆಗೆ ಹೋಗದೆ ಶುಕ್ರವಾರ ಬಂಗಾರಪೇಟೆ ಬಸ್ ಏರಿದ್ದಳು. ಆಕೆಯನ್ನು ಏಕಾಂಗಿಯಾಗಿ ಕಂಡ ದುರುಳರು ಬಾಲಕಿಯೊಂದಿಗೆ ಸಲುಗೆಯಿಂದ ಮಾತನಾಡಿ ಉದ್ಯಾನವನಕ್ಕೆ ಕರೆದೊಯ್ದು ಸಂಜೆಯವರೆಗೂ ಕಾಲ ಕಳೆದಿದ್ದಾರೆ. ಬಳಿಕ ತಡರಾತ್ರಿ ಆರೋಪಿಗಳು ಆಕೆಯನ್ನು ಖಾಸಗಿ ಬಸ್ನಲ್ಲಿ ತಣಿಮಡಗು ಗ್ರಾಮಕ್ಕೆ ಕರೆದೊಯ್ದಿದ್ದಾರೆ. ದಾರಿಯಲ್ಲಿ ಆರೋಪಿಗಳು ಮದ್ಯ ಸೇವಿಸಿ ಪ್ರತ್ಯೇಕ ಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.