ಕೋಲಾರ:ಸಿಎಂಗೆ ಸಾಕಷ್ಟು ಒತ್ತಡಗಳಿರುವುದರಿಂದ ನನ್ನಿಂದ ರಾಜೀನಾಮೆ ಪಡೆದಿದ್ದಾರೆ. ನನ್ನ ಬೆಂಬಲ ಕೂಡ ಮುಖ್ಯಮಂತ್ರಿಗೆ ಬೇಕಾಗಿತ್ತೆಂದು ಮಾಜಿ ಸಚಿವ ಹೆಚ್.ನಾಗೇಶ್ ತಿಳಿಸಿದರು.
ಜಿಲ್ಲೆಯ ಮುಳಬಾಗಲು ಪಟ್ಟಣಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಾನೂ ಅಚನಕ್ಕಾಗಿ ಶಾಸಕನಾದವನು. ಒಂದೊಳ್ಳೆ ಅವಕಾಶ ಸಿಕ್ಕಿದ್ದಕ್ಕೆ ಸಚಿವನೂ ಆದೆ. ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಕೊಟ್ಟ ಮೊದಲನೆ ಮಂತ್ರಿ ನಾನು. ಬಿಜೆಪಿ ಸರ್ಕಾರ ರಚನೆಯಾದಾಗ ಒಳ್ಳೆಯ ಖಾತೆ ಕೊಟ್ಟಿದ್ರು. ಅದಕ್ಕೆ ನಾನು ಸಿಎಂಗೆ ಆಭಾರಿ ಎಂದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹೆಚ್ ನಾಗೇಶ್ ಹೇಳಿಕೆ ನನಗೆ ಈಗಲೂ ಸಿಎಂ ಮಾತು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ನೀಡುವುದಾಗಿ ಸಿಎಂ ಹೇಳಿದ್ದಾರೆ. ಮಾತು ಕೊಟ್ಟರೆ ಅವರು ಉಳಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ನನಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿ ಸಿಕ್ಕಿರುವುದು ತೃಪ್ತಿ ತಂದಿದೆ. ರಾಜ್ಯಾದ್ಯಂತ ಸಮುದಾಯದ ಜನರ ಸೇವೆ ಮಾಡುತ್ತೇನೆ. ಜೊತೆಗೆ ಯಾರೇ ಜಿಲ್ಲಾ ಉಸ್ತುವಾರಿ ಸಚಿವರಾದರು ಅವರಿಗೆ ನನ್ನ ಬೆಂಬಲ ನೀಡುವುದಾಗಿ ಹೇಳಿದರು.
ಮಿತ್ರ ಮಂಡಳಿಯ ಸಾಕಷ್ಟು ಮಂದಿಗೆ ನನ್ನ ರಾಜೀನಾಮೆ ನೋವು ತಂದಿದೆ. ಈ ಬಗ್ಗೆ ಈಗಾಗಲೇ ಹೆಚ್ ವಿಶ್ವನಾಥ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನನಗೆ ಮತ್ತು ಮುನಿರತ್ನಗೆ ಅವಕಾಶ ನೀಡುವ ನಿರೀಕ್ಷೆ ಇದೆ. ನಮ್ಮ ಮುಂಬೈ ಮಿತ್ರ ಮಂಡಳಿಯವರೆಲ್ಲ ಒಂದಾಗಿಯೇ ಇದ್ದೇವೆ. ನಮ್ಮಲ್ಲಿ ಒಡಕಿಲ್ಲ ಎಂದು ಸ್ಪಷ್ಟಪಡಿಸಿದರು.
ನಿನ್ನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಶ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕವಾದರು. ಸ್ವಕ್ಷೇತ್ರಕ್ಕೆ ಆಗಮಿಸಿದ ಅವರಿಗೆ ಜನತೆ ಪಟಾಕಿ ಸಿಡಿಸಿ ಭರ್ಜರಿ ಸ್ವಾಗತ ಕೋರಿದರು.