ಶಿವನ ಕೊರಳಿಗೆ ನಾಗಸರ್ಪವೇ ಶೋಭೆ.. ಜನತೆಯೇ ಈಶ್ವರ ಸ್ವರೂಪಿ: ಮೋದಿ ಕೋಲಾರ: ಭ್ರಷ್ಟಾಚಾರದ ವಿರುದ್ಧ ನಾನು ಹೋರಾಟ ಮಾಡುತ್ತಿದ್ದೇನೆ. ಇದರಿಂದ ತೊಂದರೆಯಾಗಿರುವುದು ಕಾಂಗ್ರೆಸ್ನವರಿಗೆ. ಹೀಗಾಗಿ ನನ್ನ ಮೇಲೆ ಅವರಿಗೆ ಸಿಟ್ಟು. ಇದರಿಂದ ನನ್ನನ್ನು ಕಾಂಗ್ರೆಸ್ನವರು ಮತ್ತಷ್ಟು ದ್ವೇಷಿಸಲು ಶುರು ಮಾಡಿದ್ದಾರೆ. ಇದೀಗ ನನಗೆ ಧಮ್ಕಿ ಹಾಕಲು ಮುಂದಾಗಿದ್ದಾರೆ. ನಿಮ್ಮ ಸಮಾಧಿಗೆ ಹಳ್ಳ ತೋಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ನನ್ನನ್ನು ಹಾವಿಗೆ ಹೋಲಿಕೆ ಮಾಡುತ್ತಿದ್ದಾರೆ. ನಾನು ಇದನ್ನು ಸ್ವೀಕಾರ ಮಾಡುವೆ. ಶಿವನ ಕೊರಳಿಗೆ ನಾಗಸರ್ಪವೇ ಶೋಭೆ. ನನಗೆ ಈ ದೇಶದ ಜನತೆಯೇ ಈಶ್ವರ ಸ್ವರೂಪಿ. ನಾನು ಹಾವಾಗಿ ಅವರ ಕೊರಳನ್ನು ಸುತ್ತಿಕೊಳ್ಳಲು ಯಾವ ದುಃಖ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ನವರು ಇಂದಿನ ಚುನಾವಣೆಯ ದೊಡ್ಡ ವಿಷಯವನ್ನು ಹಾವು ಮಾಡಿಕೊಂಡಿದ್ದಾರೆ. ಅವರ ಚರ್ಚೆ ವಿಷಯ ಹಾವು ಆಗಿದೆ. ಈ ಮೂಲಕ ಜನತೆಯಿಂದ ಮತಗಳನ್ನು ಬೇಡಿ ಬರುತ್ತಿದ್ದಾರೆ. ಕಾಂಗ್ರೆಸ್ನವರ ಹಾವಿನ ಹೇಳಿಕೆಯನ್ನು ಸ್ವೀಕಾರ ಮಾಡುತ್ತೇನೆ. ಆದರೆ, ಸಂತರು ಮತ್ತು ಸಂಸ್ಕಾರದ ಈ ಭೂಮಿ ಕರ್ನಾಟಕದ ಜನತೆ ಈ ರೀತಿಯಾದ ಮಾತುಗಳನ್ನು ಖಂಡಿತ ಕ್ಷಮಿಸುವುದಿಲ್ಲ. ಕಾಂಗ್ರೆಸ್ನ ಈ ಬೈಗಳುಗಳನ್ನು ಮೇ 10ರಂದು ಜನರು ಬಿಜೆಪಿಗೆ ಮತ ಚಲಾವಣೆ ಮಾಡುವ ಮೂಲಕ ಚೂರು ಚೂರು ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ಪರಿವಾರದವರು ಜನರ ವಿಶ್ವಾಸ ಭಂಗ ಮಾಡಿದ್ದಾರೆ. ರೈತರಿಗೆ ದೊರೆಯಬೇಕಾದ ಶೇ.85ರಷ್ಟು ಹಣವನ್ನು ತಾವೇ ನುಂಗಿ ನೀರು ಕುಡಿದಿದ್ದಾರೆ. ಇದನ್ನ ಕಾಂಗ್ರೆಸ್ನ ಪ್ರಧಾನಿ ಅವರೇ ಹೇಳಿರುವುದು. ಅಂದರೆ ಶೇ.85ರಷ್ಟು ಕಮಿಷನ್ ತಿನ್ನುವ ಸರ್ಕಾರ ಇದ್ದರೆ, ಅದು ಕಾಂಗ್ರೆಸ್ ಸರ್ಕಾರ. ಇದು ಕರ್ನಾಟಕದ ಅಭಿವೃದ್ಧಿಯನ್ನು ಯಾವತ್ತೂ ಮಾಡಲು ಸಾಧ್ಯವಿಲ್ಲ. ಅಲ್ಲದೇ, ಕಾಂಗ್ರೆಸ್ ಸರ್ಕಾರದ ಅತ್ಯಂತ ಹೆಚ್ಚು ವಂಚನೆಗೆ ಒಳಗಾದವರು ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಮಹಿಳಾ ವರ್ಗದವರು ಎಂದು ಮೋದಿ ದೂರಿದರು.
ಕಾಂಗ್ರೆಸ್ ವಿರುದ್ಧ ಮೋದಿ ಟೀಕಾ ಪ್ರಹಾರ: ನಮ್ಮ ಸರ್ಕಾರ ಬಂದ ನಂತರ, ಕೋಟ್ಯಾಂತರ ಪಕ್ಕಾ ಮನೆಗಳನ್ನ ನೀಡಿದ್ದೇವೆ. ಹತ್ತು ಕೋಟಿಗೂ ಹೆಚ್ಚು ಮನೆಗಳಿಗೆ ನಾವು ಶೌಚಾಲಯ ಕಟ್ಟಿಸಿದ್ದೇವೆ. 9 ಕೋಟಿ ಮಹಿಳೆಯರಿಗೆ ಉಚಿತವಾಗಿ ಅಡುಗೆ ಅನಿಲವನ್ನ ನೀಡಿದ್ದೇವೆ. 2.5 ಕೋಟಿ ಮನೆಗಳಿಗೆ ನೇರವಾಗಿ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಿದ್ದೇವೆ. ಕಾಂಗ್ರೆಸ್ ಸುಳ್ಳು ಭರವಸೆ ಕೊಡುವಂತಹದ್ದು. ಕಾಂಗ್ರೆಸ್ನವರು ಭ್ರಷ್ಟಾಚಾರದ ವಿರುದ್ಧ ಯಾವುದೇ ಕಾರ್ಯಕ್ರಮ ಮಾಡೋಕೆ ಸಾಧ್ಯವಾಗಲ್ಲ. ಯಾಕಂದರೆ, ಕಾಂಗ್ರೆಸ್ನವರು ಮಾಡುವ ಪ್ರತಿಯೊಂದು ಯೋಜನೆಯಲ್ಲಿ ಭ್ರಷ್ಟಾಚಾರ ಇದೆ. ಸಾವಿರಾರು ಕೋಟಿ ರೂ. ನುಂಗಿರುವ ಹಗರಣದಲ್ಲಿ ಬೇಲ್ ಮೇಲೆ ಇದ್ದಾರೆ. ಇಂತ ವ್ಯಕ್ತಿಗಳು ಭ್ರಷ್ಟಾಚಾರದ ವಿರುದ್ಧ ಯಾವ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
2014ರ ಮುಂಚೆ ಹತ್ತು ವರ್ಷ ಕಾಂಗ್ರೆಸ್ ಸರ್ಕಾರ ಇತ್ತು. ಆ ಸಮಯದಲ್ಲಿ ಭ್ರಷ್ಟಾಚಾರಿಗಳನ್ನು ಹಿಡಿದು ಅವರಿಂದ ವಸೂಲಿ ಮಾಡಿರುವುದು ಕೇವಲ ಐದು ಸಾವಿರ ಕೋಟಿ ಮಾತ್ರ. ನಾವು ಅಧಿಕಾರಕ್ಕೆ ಬಂದ ನಂತರ ಒಂದು ಲಕ್ಷ ಕೋಟಿ ರೂಪಾಯಿ ವಸೂಲಿ ಮಾಡಿದ್ದೇವೆ. ಡಿಜಿಟಲ್ ಇಂಡಿಯಾ ಮೂಲಕ ಕೇಂದ್ರದಿಂದ ಕಳಿಸುವ ಹಣ, ಯಾರಿಗೆ ಸೇರಬೇಕೋ ಅವರಿಗೆ ಜಮಾ ಆಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 29 ಲಕ್ಷ ಕೋಟಿ ರೂಪಾಯಿಗಳನ್ನು ಜತನೆಗೆ ಕಳಿಸಿದ್ದೇವೆ. ಹಿಂದಿನ ಸರ್ಕಾರ ಆಗಿದರೆ, ಶೇ15ರಷ್ಟು ಹಣ ಮಾತ್ರ ಜನತೆಗೆ ತಲುಪುತ್ತಿತ್ತು. ಉಳಿದ 24 ಲಕ್ಷ ಕೋಟಿ ತಲುಪುತ್ತಿರಲಿಲ್ಲ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ನವರು 2004ರಲ್ಲಿ ಘೋಷಣಾ ಪತ್ರವೊಂದನ್ನು ನೀಡಿದ್ದರು. ಈ ದೇಶದ ರೈತರುಗೆ ನೇರ ವರಮಾನ ಸಹಾಯಕ ಯೋಜನೆ ನೀಡುವುದಾಗಿ ಹೇಳಿದ್ದರು. 2009ರಲ್ಲೂ ಇದೇ ಘೋಷಣಾ ಪತ್ರವನ್ನೇ ಬಿಡುಗಡೆ ಮಾಡಿದ್ದರು. ಆದರೆ, ಯಾವ ಯೋಜನೆಯನ್ನೂ ಜಾರಿಗೆ ತರಲಿಲ್ಲ. ನಾವು 2014ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದೆವು. ನೇರವಾಗಿ ರೈತರ ಖಾತೆಗೆ 2.5 ಲಕ್ಷ ಕೋಟಿ ಜಮಾ ಆಗಿದೆ. ಹೀಗಾಗಿ ಕಾಂಗ್ರೆಸ್ ಆಶ್ವಾಸನೆ ಎಂದರೆ ಜನರಿಗೆ ಮೋಸ. ಅದನ್ನು ನಿಜ ಮಾಡುವುದು ಬಿಜೆಪಿಯಿಂದ ಮಾತ್ರ ಸಾಧ್ಯ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ ಹಣದ ಜೊತೆಗೆ ರಾಜ್ಯ ಸರ್ಕಾರವೂ ಸಹ 4 ಸಾವಿರ ರೂ. ನೀಡುತ್ತಿದೆ. ಇದರ ಜೊತೆಗೆ ರೈತರಿಗೆ ಅನುಕೂಲವಾಗುವಂತಹ ಕೋಲ್ಡ್ ಸ್ಟೋರೇಜ್, ದೊಡ್ಡ ಟೆಕ್ಸ್ ಟೈಲ್ಸ್ ಅಂಗಡಿಗಳನ್ನು ಪ್ರಾರಂಭ ಮಾಡುತ್ತಿದ್ದೇವೆ. ಇದರಿಂದ ರೈತರಿಗೆ ಬಹಳ ದೊಡ್ಡ ಉಪಯೋಗ ಆಗುತ್ತದೆ ಎಂದು ಮೋದಿ ಹೇಳಿದ್ರು.
ಇದನ್ನೂ ಓದಿ:ಕಾಂಗ್ರೆಸ್ನಿಂದ ಸುಳ್ಳು ಗ್ಯಾರಂಟಿ ಕಾರ್ಡ್.. ಭ್ರಷ್ಟಾಚಾರದಿಂದ ಕರ್ನಾಟಕ ಬಚಾವ್ ಮಾಡಬೇಕು: ಪ್ರಧಾನಿ ಮೋದಿ ಹೇಳಿಕೆ