ಕೋಲಾರ:ಈ ಊರಲ್ಲಿ ಸಂಕ್ರಾಂತಿ ಅಂದ್ರೇನೆ ಜನರಿಗೆ ಭಯ. ಸಂಕ್ರಾಂತಿ ಬಂತಂದ್ರೆ ಆ ಹಳ್ಳಿಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗುತ್ತದೆ. ಅಕಸ್ಮಾತ್ ಹಬ್ಬಾಚರಣೆ ಮಾಡಿದ್ರೆ ಊರಿಗೇ ಕೇಡಾಗುತ್ತೆ. ದನ-ಕರುಗಳು ಒಂದೊಂದಾಗಿ ಸಾಯುತ್ತವೆ.
ಹೌದು. ಅದು ಬರದ ನಾಡು ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮ. ಈ ಹಳ್ಳಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಈ ಊರಲ್ಲಿ ವಿದ್ಯಾವಂತರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೂಢನಂಬಿಕೆ ಎಂದೆನಿಸಿದರೂ ಇವರೂ ಕೂಡ ಹಿರಿಯರ ಮಾತನ್ನ ಪಾಲಿಸದೇ ಇರುವುದಿಲ್ಲ.
ಹಿಂದೆಲ್ಲಾ ರಾಜರ ಕಾಲದಲ್ಲಿ ಅರಾಭಿಕೊತ್ತನೂರಿಗೆ ದೊಡ್ಡ ಕಾಯಿಲೆಯೊಂದು ವಕ್ಕರಿಸಿಕೊಂಡು ಊರಲ್ಲಿದ್ದ ದನ-ಕರುಗಳು ಇದ್ದಕ್ಕಿಂದ್ದಂತೆ ಸಾಯೋದಕ್ಕೆ ಶುರುವಾಗಿತ್ತಂತೆ. ಆಗ ದಿಕ್ಕು ತೋಚದಂತಾದ ಊರಿನ ಹಿರಿಯರು ನಡೀತಿರೋ ಅನಾಹುತವನ್ನು ನಿಲ್ಲಿಸುವಂತೆ ಬಸವಣ್ಣನಲ್ಲಿ ಕೋರಿಕೊಂಡರಂತೆ. ಸಂಕ್ರಾಂತಿ ಹಬ್ಬದಲ್ಲಿ ದನ-ಕರುಗಳಿಗೆ ಮಾಡೋ ಪೂಜೆ ಪುನಸ್ಕಾರವನ್ನು ಬೇರೊಂದು ದಿನ ನಿನಗೆ ಮಾಡ್ತೀವಿ ಅಂತಾ ಪ್ರಾರ್ಥನೆ ಮಾಡಿಕೊಂಡ್ರಂತೆ. ಆಗ ರಾಸುಗಳ ಸಾವು ನಿಂತಿದ್ರಿಂದ ಸಂಕ್ರಾಂತಿ ಹಬ್ಬವನ್ನು ಊರಲ್ಲಿ ಮಾಡದಿರುವ ಪ್ರತೀತಿಯು ಅಂದಿನಿಂದಲೂ ಜಾರಿಗೆ ಬಂದಿದೆ.