ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡಿದ ಪತ್ನಿ- ಶಂಕೆ: ಕೋಲಾರ:ಜನಪದ ಹಾಡುಗಳ ಮೂಲಕ ಅದೆಷ್ಟೋ ಜನರ ಮನಸ್ಸು ಗೆದ್ದಿದ್ದ, ಕೋಲಾರ ಜಾನಪದ ಕಲಾ ಸಂಘದ ಅಧ್ಯಕ್ಷ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾಗಿದ್ದ ಕಲಾವಿದನನ್ನು ಪತ್ನಿ ಪ್ರಿಯಕರನೊಂದಿಗೆ ಸೇರಿ ಕೊಂದು, ಬೈಕ್ ಅಪಘಾತ ಎಂದು ಬಿಂಬಿಸಿರುವ ಪ್ರಕರಣ ಮಂಗಳವಾರ ಕೋಲಾರ ಜಿಲ್ಲೆಯ ಜನ್ನಘಟ್ಟ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಜನಪದ ಕಲಾವಿದ ಕೃಷ್ಣಮೂರ್ತಿ ಹತ್ಯೆಗೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರಿಸಿದ್ದಾರೆ.
ತನ್ನ ಪತ್ನಿಗಿದ್ದ ಅಕ್ರಮ ಸಂಬಂಧ ಗೊತ್ತಿದ್ದರೂ ತನ್ನ ಮಕ್ಕಳಿಗೆ ತಿಳಿಯದಂತೆ ಸಹಿಸಿಕೊಂಡಿದ್ದ ಎನ್ನಲಾಗಿದೆ. ಆದರೆ ಸೋಮವಾರ ರಾತ್ರಿ ಪತ್ನಿ ಪ್ರಿಯಕರನಿಂದ ಖ್ಯಾತ ಜನಪದ ಕಲಾವಿದ ಕೃಷ್ಣಮೂರ್ತಿಯನ್ನು ಹತ್ಯೆ ಮಾಡಿಸಿದ್ದಾಳೆ ಎಂದು ಕಲಾವಿದನ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೋಲಾರ ತಾಲೂಕಿನ ಜನ್ನಘಟ್ಟ ಬಳಿ ಹಿಂದಿನ ರಾತ್ರಿ 8 ಗಂಟೆ ಸುಮಾರಿಗೆ ಕಲಾವಿದ 45 ವರ್ಷದ ಕೃಷ್ಣಮೂರ್ತಿ ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾರೆ ಎಂಬ ವದಂತಿ ಗ್ರಾಮದಲ್ಲಿ ಹರಡಿತ್ತು. ಅದರಂತೆ ಜಿಲ್ಲೆಯ ಕಲಾವಿದರು, ವಿವಿಧ ಸಂಘಟನೆಗಳ ಮುಖಂಡರು, ಒಬ್ಬ ಕಲಾವಿದ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವುದನ್ನು ಕೇಳಿ ಮರಗಿದ್ದರು.
ಆದರೆ ಬೆಳಗಾಗುವಷ್ಟರಲ್ಲಿ ಹತ್ಯೆ ಮಾಡಿದ ಬೈಕ್ ಅಪಘಾತ ಎಂದು ಬಿಂಬಿಸಲಾಗಿದೆ ಎನ್ನುವ ಸುದ್ದಿ ಜೋರಾಗಿ ಕೇಳಿಬಂದಿತ್ತು. ಸಂಬಂಧಿಕರು ಸೇರಿದಂತೆ ಕೃಷ್ಣಮೂರ್ತಿ ಪತ್ನಿಗೆ ಅಕ್ರಮ ಸಂಬಂಧವಿದ್ದು, ಆಕೆಯೇ ಕೊಲೆ ಮಾಡಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಅಲ್ಲದೇ ಕುಟುಂಬದಲ್ಲಿ ಪ್ರತಿನಿತ್ಯ ಗಲಾಟೆ, ನ್ಯಾಯಾ ಪಂಚಾಯಿತಿ ನಡೆದಿದ್ದೂ ಇದೆ ಎಂದು ಹೇಳಲಾಗುತ್ತಿದೆ. ಒಂದು ವರ್ಷದ ಹಿಂದೆ ಗಂಡ ಮಕ್ಕಳನ್ನ ಬಿಟ್ಟು ಓಡಿ ಹೋಗಿದ್ದರು ಎಂಬ ಸುದ್ದಿಯೂ ಗ್ರಾಮದಲ್ಲಿ ಹರಿದಾಡುತ್ತಿದೆ. ಇಬ್ಬರ ಜಗಳದ ಸಂದರ್ಭದಲ್ಲಿ ಆಗ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಿದ್ದರು. ಆದರೂ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಾ ಇದ್ದ ಪತ್ನಿ ಸೌಮ್ಯ ಗಂಡನೊಂದಿಗೆ ಒಂದಿಲ್ಲೊಂದು ವಿಚಾರಕ್ಕೆ ತಗಾದೆ ತೆಗೆಯುತ್ತಲೇ ಇದ್ದರು ಎನ್ನಲಾಗಿದೆ. ಆದರೆ ಎಲ್ಲವನ್ನೂ ತನ್ನ ಮೂರು ಜನ ಮಕ್ಕಳಿಗಾಗಿ ಸಹಿಸಿಕೊಂಡಿದ್ದ ಎಂದು ಮೃತ ಕಲಾವಿದನ ತಾಯಿ ಚೌಡಮ್ಮ ಅಳಲು ತೋಡಿಕೊಂಡಿದ್ದಾರೆ.
ತಾಯಿ ಚೌಡಮ್ಮ ಆರೋಪವೇನು?: ’’ಕೃಷ್ಣಮೂರ್ತಿ ಹಾಗೂ ಸೌಮ್ಯಾಳ 10 ವರ್ಷಗಳ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಗಣೇಶ್ ಮೂರ್ತಿ ಎಂಬ ಮಗ ಜ್ಞಾನಶ್ರೀ ಹಾಗೂ ದತ್ತಾಶ್ರೀ ಎಂಬ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಮಕ್ಕಳಿಗಾಗಿ ಕೃಷ್ಣಮೂರ್ತಿ ಸಂಬಂಧಿಕರ ಮಾತು ಕೇಳಿ ಹಲವು ಬಾರಿ ನ್ಯಾಯ ಪಂಚಾಯಿತಿ ಮಾಡಿ ಸಹಿಸಿಕೊಂಡಿದ್ದರು. ಆದರೆ ಹಳೆ ಚಾಳಿ ಬಿಡದ ಸೌಮ್ಯ ಗಂಡ ಇಲ್ಲದ ವೇಳೆ ತನ್ನ ಪ್ರಿಯಕರನನ್ನ ಮನೆಗೆ ಕರೆಸಿಕೊಳ್ಳುತ್ತಿದ್ದರು. ಕಳೆದ ರಾತ್ರಿ ತನ್ನ ಪ್ರಿಯಕರನಿಗೆ ತಿಳಿಸಿ ಗ್ರಾಮದ ರೈಲ್ವೆ ಅಂಡರ್ ಪಾಸ್ ಬಳಿ ರಾಡ್ ನಿಂದ ಹೊಡೆದು ಕೊಲೆ ಮಾಡಿ, ಬೈಕ್ ನಿಂದ ಬಿದ್ದು ಮೃತಪಟ್ಟಿರುವಂತೆ ಬಿಂಬಿಸಲಾಗಿದೆ. ಅಷ್ಟೇ ಅಲ್ಲ ಈ ಸುದ್ದಿಯನ್ನು ಗ್ರಾಮದಲ್ಲೆಲ್ಲ ಈಕೆಯೆ ಸುದ್ದಿ ಹಬ್ಬಿಸಿದ್ದಾಳೆ‘‘ ಎಂದು ಕೃಷ್ಣಮೂರ್ತಿ ತಾಯಿ ಚೌಡಮ್ಮ ಆರೋಪಿಸಿದ್ದಾರೆ.
ಪೊಲೀಸರು ಏನು ಹೇಳ್ತಾರೆ?: ‘‘ಜನಘಟ್ಟ ಕೃಷ್ಣಮೂರ್ತಿ ಜನಪದ ಕಲಾವಿದ , ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದಾರೆ ಎಂಬ ಆಸ್ಪತ್ರೆಯಿಂದ ರಾತ್ರಿ ಮಾಹಿತಿ ಬಂದಿತು. ಕೃಷ್ಣಮೂರ್ತಿ ಜನಪದ ಕಲಾವಿದರಾಗಿ ಜನಪ್ರಿಯರಾಗಿದ್ದರು, ಈ ರೀತಿ ಆಗಬಾರದಿತ್ತು ಎಂದು ಜನ ಹೇಳುತ್ತಿದ್ದರು. ರಾತ್ರಿ 9 ಗಂಟೆಗೆ ಆಸ್ಪತ್ರೆಗೆ ಹೋಗಿ ಠಾಣೆಯ ಪೊಲೀಸರು ಪರಿಶೀಲಿಸಿದಾಗ, ಆತನ ಹೆಡ್ಗೆ ಇಂಜ್ಯುರ್ ಆಗಿತ್ತು, ಅದು ಅಪಘಾತ ಆಗಿದ್ದ ರೀತಿ ಇರಲಿಲ್ಲ. ವೈದ್ಯರು ಕೇಳಿದ್ರೆ..ಯಾವುದೇ ರಾಡ್ನಿಂದ ಪೆಟ್ಟು ಬಿದ್ದಿರಬಹುದು,ಅಪಘಾತ ಆಗಿದ್ದರೆ ಡೀಪ್ ಇಂಜ್ಯುರಿ ಆಗಬೇಕಾಗಿತ್ತು ಎಂದು ಅನುಮಾನ ವ್ಯಕ್ತಪಡಿಸಿದ್ದರು‘‘
’’ಕೃಷ್ಣ ಮೂರ್ತಿಯ ತಾಯಿ, ಸಂಬಂಧಿಕರನ್ನು ವಿಚಾರಣೆ ಒಳಪಡಿಸಿದಾಗ,ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹತ್ಯೇಗಿಡಾದ ಕಲಾವಿದ ಕೃಷ್ಣಮೂರ್ತಿ ಜತೆಗೆ ಆತನ ಪತ್ನಿ ಸರಿ ಇರಲಿಲ್ಲ. ಹಿಂದಿನ ಘಟನೆಗಳನ್ನು ಆಧರಿಸಿ, ಈ ಹಿಂದೆ ಇವರ ಕುಟಂಬ ವಿಚಾರದಲ್ಲಿ ತಲೆಹಾಕುತ್ತಿದ್ದ ಮೂವರು ಜನರನ್ನು ವಶಕ್ಕೆ ಪಡೆದಿದ್ದೇವೆ. ಕಲಾವಿದನ ಕೃಷ್ಣಮೂರ್ತಿ ಪತ್ನಿ ಸೌಮ್ಯ, ಪ್ರಿಯಕರ ಶ್ರೀನಿವಾಸಪುರ ತಾಲೂಕು ಚೊಕ್ಕರೆಡ್ಡಪಲ್ಲಿ ಶ್ರೀಧರ್, ತನ್ನ ಸ್ನೇಹಿತ ಶ್ರೀಧರ್ ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ. ಸಂಜೆ ಹೊತ್ತಿಗೆ ಸಂಪೂರ್ಣ ಮಾಹಿತಿ ಸಿಗಲಿದೆ‘‘ ಎಂದು ಕೋಲಾರ ಎಸ್ಪಿ ನಾರಾಯಣ ತಿಳಿಸಿದ್ದಾರೆ.
ಇದನ್ನೂಓದಿ:ರೀಲ್ಸ್ ಹುಚ್ಚಾಟಕ್ಕೆ ಇಬ್ಬರು ಮಹಿಳೆಯರು ಬಲಿ: ಹರಿಯಾಣದಲ್ಲಿ ಭೀಕರ ಹಿಟ್ & ರನ್ ಕೇಸ್