ಕೋಲಾರ :ಅದು ಸಮಯ ತಿಳಿಸುವ ಭವ್ಯ ಕಟ್ಟಡವಾದರೂ ಆ ಕಟ್ಟಡದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಮಯ ಬಂದಿರಲಿಲ್ಲ. ಆದರೆ, ಸಂಸದ ಮುನಿಸ್ವಾಮಿ ಮೌನ ಪ್ರತಿಭಟನೆ ಮಾಡುವ ಮೂಲಕ ಎರಡೇ ದಿನದಲ್ಲಿ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ವೀರಾಜಮಾನವಾಗಿ ಹಾರಾಡುವಂತೆ ಮಾಡಿದ್ದಾರೆ.
ಕಳೆದ ಎರಡು ದಿನಗಳಿಂದ ಕೋಲಾರದ ಕ್ಲಾಕ್ ಟವರ್ ಏರಿಯಾ ಆತಂಕದ ಕೇಂದ್ರವಾಗಿ, ಬೂದಿ ಮುಚ್ಚಿದ ಕೆಂಡದಂತಿತ್ತು. ಇದಕ್ಕೆ ಕಾರಣ ಸಂಸದ ಮುನಿಸ್ವಾಮಿ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕು, ಇಲ್ಲವಾದಲ್ಲಿ ಪ್ರತಿಭಟನೆ ಮಾಡುವ ಹೇಳಿಕೆ ನೀಡಿದ್ದರು. ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮುನಿಸ್ವಾಮಿ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಪರಿಣಾಮ ಕೂಡಲೇ ಎಚ್ಚೆತ್ತು ಕೊಂಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎರಡೂ ಕೋಮಿನ ಮುಖಂಡರುಗಳ ಸಭೆ ಕರೆದು ಮನವೊಲಿಸಿ, ಮುನಿಸ್ವಾಮಿ ಅವರಿಗೆ ಪ್ರತಿಭಟನೆಗೆ ಅವಕಾಶ ನೀಡದೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂದು ಮುಂಜಾನೆ ಐದು ಗಂಟೆಯಿಂದಲೇ ಕ್ಲಾಕ್ ಟವರ್ ಏರಿಯಾದಲ್ಲಿ ನಾಕಾ ಬಂಧಿ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕ್ಲಾಕ್ ಟವರ್ಗೆ ಬಣ್ಣ ಬಳಿಯುವ ಕೆಲಸ ಮಾಡಿದ್ದರು.