ಕೋಲಾರ: ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿರುವ ಪರಿಣಾಮ ಕಾಡಿನಲ್ಲಿದ್ದ ಸಾವಿರಾರು ಮರಗಳು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ನೇರಳೆಕೆರೆ ಬಳಿ ಇರುವ ಪ್ರಸಿದ್ಧ ಬ್ಯಾಟರಾಯನಸ್ವಾಮಿ ಬೆಟ್ಟದಲ್ಲಿ ಜರುಗಿದೆ.
ಬ್ಯಾಟರಾಯನಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನೂರಾರು ಎಕರೆ ಅರಣ್ಯ ಪ್ರದೇಶವಿದ್ದು, ಪೊಲೀಸರ ಕಣ್ತಪ್ಪಿಸಿ ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ಸೇರಿದಂತೆ ಕುಡುಕರ ತಾಣವಾಗಿತ್ತು. ಈ ಹಿನ್ನೆಲೆ ಕಿಡಿಗೇಡಿಗಳು ಕುಡಿದ ನಶೆಯಲ್ಲಿ ಕಾಡಿಗೆ ಬೆಂಕಿಹಚ್ಚಿರುವ ಪರಿಣಾಮ ಕಾಡಿನಲ್ಲಿದ್ದ ಬೆಲೆ ಬಾಳುವ ಸಾವಿರಾರು ಮರಗಳು ಸುಟ್ಟು ಕರಕಲಾಗಿವೆ.
ಕಿಡಿಗೇಡಿಗಳಿಂದ ಕಾಡಿಗೆ ಬೆಂಕಿ ಅಲ್ಲದೆ ಪ್ರಸಿದ್ಧ ಬ್ಯಾಟರಾಯನಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನೂರಾರು ನವಿಲುಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ವಾಸವಿದ್ದವು. ಹಲವಾರು ಪ್ರಾಣಿಪಕ್ಷಿಗಳಿಗೆ ಈ ಕಾಡಿನಲ್ಲಿ ಆಹಾರ ಸಿಗುತ್ತಿತ್ತು. ಈಗ ನವಿಲುಗಳು ಮೊಟ್ಟೆ ಇಟ್ಟಿದ್ದು, ಬೆಂಕಿಯ ಕಿನ್ನಾಲೆಗೆಗೆ ನವಿಲುಗಳ ಮೊಟ್ಟೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಬ್ಯಾಟರಾನಹಳ್ಳಿ ಗ್ರಾಮಸ್ಥರಿಂದ ಕಾಡಿಗೆ ಬಿದ್ದಿದ್ದ ಬೆಂಕಿ ನಂದಿಸುವ ಕೆಲಸ ಆಗಿದ್ದು, ಕಿಡಿಗೇಡಿಗಳ ಈ ಕೃತ್ಯಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಬೇಸಿಗೆ ಸಮೀಪಿಸುತ್ತಿರುವುದರಿಂದ ಕಾಡಿನಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರ ನೀರಿನ ವ್ಯವಸ್ಥೆ ಮಾಡುವುದರೊಂದಿಗೆ, ಕಾಡಿನಲ್ಲಿ ಅಕ್ರಮ ಚಟಿವಟಿಕೆಗಳು ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.