ಕೋಲಾರ: ದಶಕಗಳ ಕಾಲದಿಂದ ವಿವಾದಿತ ವಿಷಯವಾಗಿದ್ದ ರಸ್ತೆ ಅಗಲೀಕರಣ ಸದ್ಯ ಸಮಾಪ್ತಿ ಕಂಡಿದೆ. ಹತ್ತಾರು ವರ್ಷಗಳ ಹೋರಾಟಕ್ಕೆ ಇದೀಗ ಫಲಸಿಕ್ಕಂತಾಗಿದೆ. ಹೈಕೋರ್ಟ್ನ ಆದೇಶದಂತೆ ಇಂದು ಜಿಲ್ಲಾಡಳಿತ ಜೆಸಿಬಿಗಳ ಮುಖಾಂತರ ರಸ್ತೆ ಅಗಲೀಕರಣಕ್ಕೆ ನಾಂದಿಹಾಡಿದೆ.
ಇಂದು ಬೆಳಗ್ಗೆ ನಗರದ ಕೆಜಿಎಫ್ನಲ್ಲಿ ಪೊಲೀಸ್ ವಾಹನಗಳು ಸುತ್ತುವರೆದು ಜೆಸಿಬಿಗಳು ರಸ್ತೆಗಿಳಿದಿದ್ದವು. ಪೊಲೀಸ್ ಸರ್ಪಗಾವಲಿನಲ್ಲಿ ರಸ್ತೆ ಒತ್ತುವರಿ ತೆರವು ಕಾರ್ಯ ಆರಂಭಿಸಿದ್ದು, ನೆನೆಗುದಿಗೆ ಬಿದ್ದಿದ್ದ ಇಲ್ಲಿನ ಅಶೋಕ ನಗರ ರಸ್ತೆ ಕಾಮಗಾರಿಗೆ ಮರುಜೀವ ಬಂದಿದೆ.
ರಸ್ತೆ ಅಗಲೀಕರಣ ಸಂಬಂಧ ಸುಮಾರು 12 ವರ್ಷಗಳಿಂದ ತೆರವು ಕಾರ್ಯ ನಡೆಯದೆ ವಿವಾದ ಸೃಷ್ಟಿಯಾಗಿದ್ದ ರಸ್ತೆ ಇದಾಗಿದ್ದು, 4 ಜೆಸಿಬಿಗಳ ಮೂಲಕ ನೂರಾರು ಪೊಲೀಸರ ಸಮ್ಮುಖದಲ್ಲಿ ಕಾರ್ಯಚರಣೆ ನಡೆಯಿತು.
ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಎಸ್.ಮುನಿಸ್ವಾಮಿ ಸ್ಥಳಿಯರೊಂದಿಗೆ ಮಾತುಕತೆ ನಡೆಸಿ ರಸ್ತೆ ಅಭಿವೃದ್ದಿಗೆ ಸಹಕರಿಸುವಂತೆ ಮನವೊಲಿಸಿದರು. ಇದೆ ವೇಳೆ ಮಾತನಾಡಿದ ಅವರು, ಹಿಂದಿನ ಸಂಸದರ ರಾಜಕೀಯ ಸ್ವಪ್ರತಿಷ್ಠೆಯಿಂದ ರಸ್ತೆ ಅಭಿವೃದ್ಧಿಯಾಗಿಲ್ಲ, ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದರು ಹಾಗಾಗಿ ರಸ್ತೆ ಅಭಿವೃದ್ದಿಯಾಗಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದರಲ್ಲದೆ ಬಿಜೆಪಿ ಸರ್ಕಾರ ಇದ್ದ ಕಾರಣ ಇಷ್ಟೆಲ್ಲಾ ಅಭಿವೃದ್ಧಿಯಾಗುತ್ತಿದೆ ಎಂದುರು.