ಮರ್ಯಾದಾ ಹತ್ಯೆ ಪ್ರಕರಣ: ಎಸ್ಪಿ ಮಾಹಿತಿ ಕೋಲಾರ: ಮರ್ಯಾದೆಗಂಜಿ ಸ್ವತಃ ತಂದೆಯೇ ಮಗಳನ್ನು ಕೊಲೆಗೈದ ಘಟನೆ ಮುಳಬಾಗಿಲು ತಾಲ್ಲೂಕಿನ ಮುಸ್ಟೂರು ಗ್ರಾಮದಲ್ಲಿ ನಡೆದಿದೆ. ಸೋದರ ಸಂಬಂಧಿಯೊಬ್ಬರನ್ನು ಪ್ರೀತಿಸಿ ಮದುವೆಯಾಗ್ತೀನಿ ಎಂದಿದ್ದಕ್ಕೆ ಮಗಳಿಗೆ ಬುದ್ಧಿ ಹೇಳಿದ್ದ ತಂದೆ, ಆಕೆ ಕೇಳದೇ ಹೋದಾಗ ಬೇರೆ ಯುವಕನಿಗೆ ಕೊಟ್ಟು ಮದುವೆ ಮಾಡಿದ್ದಾನೆ. ಆಗಲೂ ಮಾತು ಕೇಳದೇ ಇದ್ದಾಗ ಮಗಳನ್ನು ಹೊಡೆದು ಕೊಂದು ಶವ ಸುಟ್ಟು ಹಾಕಿದ್ದ. ಬಳಿಕ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ಸುದೀರ್ಘ ತನಿಖೆ ನಡೆಸಿದ ಪೊಲೀಸರು ಆರೋಪಿ ತಂದೆಯೇ ಎಂಬುದನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಎಸ್ಪಿ ನಾರಾಯಣ ಹೇಳಿಕೆ:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಮಾಹಿತಿ ನೀಡಿದ್ದು, "ಬಾಲಕಿಯು ತನ್ನ ಸೋದರ ಸಂಬಂಧಿಯನ್ನು ಪ್ರೀತಿಸುತ್ತಿದ್ದಳು. ಈ ವಿಷಯ ಗೊತ್ತಾಗಿ ತಂದೆಯು ಮಗಳಿಗೆ ಬುದ್ಧಿಮಾತು ಹೇಳಿದ್ದಾನೆ. ಆದರೆ ಆಕೆ ಮಾತು ಕೇಳದೇ ಇದ್ದಾಗ ಜೋಡಿಕೃಷ್ಣಾಪುರ ಗ್ರಾಮದ ಯುವಕನೊಬ್ಬನಿಗೆ ಕೊಟ್ಟು 2023ರ ಏಪ್ರಿಲ್ ತಿಂಗಳಲ್ಲಿ ಬಾಲ್ಯ ವಿವಾಹ ಮಾಡಿದ್ದ. ಮದುವೆಯಾದರೂ ಮಗಳು ಮಾತು ಕೇಳದೇ, ತನ್ನ ಪ್ರಿಯಕರನ ಜೊತೆಗೆ ಫೋನ್ನಲ್ಲಿ ಮಾತನಾಡುತ್ತಿದ್ದಳು. ಈ ಕಾರಣಕ್ಕೆ ಅಳಿಯ ನಿಮ್ಮ ಮಗಳನ್ನು ಕರೆದುಕೊಂಡು ಹೋಗು ಎಂದು ಆಕೆಯ ತಂದೆಗೆ ಹೇಳಿದ್ದಾನೆ".
"21-05-2023ರಂದು ಮಗಳನ್ನು ಮನೆಗೆ ಕರೆತರಲು ಆರೋಪಿಯು ಹೋಗಿದ್ದಾನೆ. ನಂತರ, ಮಗಳಿಂದ ತನ್ನ ಮರ್ಯಾದೆ ಹೋಗುತ್ತದೆ ಎಂದು ಭಾವಿಸಿ ತೋಟದ ಮನೆಗೆ ಆಕೆಯನ್ನು ಕರೆದೊಯ್ದು ಕಟ್ಟಿಗೆಯಿಂದ ಹೊಡೆದು ಕೊಂದು ಹಾಕಿ, ಶವ ಸುಟ್ಟು ಹಾಕಿದ್ದಾನೆ. ನಂತರ ಮಗಳು ಕಾಣೆಯಾಗಿದ್ದಾಳೆ ಎಂದು ತಾನೇ ದೂರು ಕೊಟ್ಟು ಸುಮ್ಮನಾಗಿದ್ದ. ಈ ವೇಳೆ ಕೋಲಾರ ಎಸ್ಪಿ ಕಚೇರಿಗೆ ಗ್ರಾಮದ ಯಾರೋ ಕೆಲವರು ಮೂಕರ್ಜಿ ಬರೆದು ಬಾಲಕಿ ಕಾಣೆಯಾದ ದಿನ ಮತ್ತು ಅದೇ ದಿನ ಹುಲ್ಲಿಗೆ ಬೆಂಕಿ ಬಿದ್ದಿರುವುದರಿಂದ ತಂದೆಯೇ ಮಗಳನ್ನು ಕೊಂದು ಹಾಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ತಿಳಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರಿಗೆ ತಂದೆಯೇ ಮಗಳನ್ನು ಕೊಂದು ಸುಟ್ಟು ಹಾಕಿರುವುದು ಗೊತ್ತಾಗಿದೆ. ಮಗಳು ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದ ತಂದೆ ಆಗಾಗ ಪೊಲೀಸ್ ಠಾಣೆಗೂ ಬಂದು ವಿಚಾರಿಸುತ್ತಿದ್ದ" ಎಂದು ಎಸ್ಪಿ ತಿಳಿಸಿದ್ದಾರೆ.
"ಇದೀಗ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ನಂಗಲಿ ಪೊಲೀಸರು ಮತ್ತು ಎಫ್ಎಸ್ಎಲ್ ತಂಡ ತಹಶೀಲ್ದಾರ್ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ ಬಾಲಕಿಯನ್ನು ಕೊಂದು ಸುಟ್ಟು ಹಾಕಿರುವ ಸ್ಥಳದಲ್ಲಿ ಶವದ ಅವಶೇಷಗಳನ್ನು ಸಂಗ್ರಹಿಸಿದೆ" ಎಂದು ಎಸ್ಪಿ ನಾರಾಯಣ್ ತಿಳಿಸಿದರು.
ಇದನ್ನೂ ಓದಿ:ಹಾಸನ: ಕೆರೆಗೆ ಹಾರಿ ಪತ್ನಿ ಆತ್ಮಹತ್ಯೆ, ರಕ್ಷಿಸಲು ಹೋದ ಪತಿಯೂ ಸಾವು