ಕೋಲಾರ: ಪದವಿ ಪ್ರವೇಶಾತಿ ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ ದಾಖಲಾತಿ ಪರಿಶೀಲನೆ ವೇಳೆ 8 ನಕಲಿ ಅಂಕಪಟ್ಟಿಗಳು ದೊರೆತಿರುವ ಘಟನೆ ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಮೂಲ ದಾಖಲಾತಿಗಳನ್ನು ಆಯಾಯ ಕಾಲೇಜುಗಳು ಅಂತಿಮ ಪರಿಶೀಲನೆಗೆಂದು ವಿವಿಗೆ ಸಲ್ಲಿಸಿದಾಗ, ವಿದ್ಯಾರ್ಥಿಗಳು ನಕಲಿ ಅಂಕಪಟ್ಟಿಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯದ ಪರೀಕ್ಷಾ ಮಂಡಳಿ ಹೆಸರಿನಲ್ಲೂ ನಕಲಿ ಅಂಕಪಟ್ಟಿ ತಯಾರು ಮಾಡಿಕೊಂಡು ಬಂದಿರುವ ಕೆಲ ವಿದ್ಯಾರ್ಥಿಗಳು ಪ್ರವೇಶಾತಿಗಾಗಿ ನಕಲಿ ಅಂಕಪಟ್ಟಿಯನ್ನು ನೀಡಿದ್ದು, ಈ ಹಿನ್ನೆಲೆ ದಾಖಲಾತಿ ಪರಿಶೀಲನೆ ನಡೆಸಿದಾಗ ಎಂಟು ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ.
ಈ ಕುರಿತು ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ ಮಾತನಾಡಿ, ಬೆಂಗಳೂರು ಉತ್ತರ ವಿವಿಯಲ್ಲಿ ಪದವಿ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದ್ದು, ಈ ವೇಳೆ ಇತರ ರಾಜ್ಯಗಳ 8 ವಿದ್ಯಾರ್ಥಿಗಳು ನಕಲಿ ಅಂಕಪಟ್ಟಿಗಳು ಸಲ್ಲಿಸಿ ಪದವಿಗೆ ಪ್ರವೇಶಾತಿ ಪಡೆದಿದ್ದರು. ಇದು ನಮ್ಮ ಗಮನಕ್ಕೆ ಬಂದಿದ್ದು, ತಕ್ಷಣವೆ ಕ್ರಮ ಕೈಗೊಂಡು ಆ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ರದ್ದುಗೊಳಿಸಲಾಗಿದೆ.