ಬೆಂಗಳೂರು/ಕೋಲಾರ: ಸಿಐಡಿ ಡಿಎಸ್‌ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣ ಸಂಬಂಧ ನಾಲ್ವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಡಿಎಸ್‌ಪಿ ಲಕ್ಷ್ಮೀ ಕೌಟುಂಬಿಕ ಹಿನ್ನೆಲೆ:
ಆತ್ಮಹತ್ಯೆಗೆ ಶರಣಾದ ಡಿಎಸ್‌ಪಿ ಲಕ್ಷ್ಮೀ ಅವರು ಜಿಲ್ಲೆಯ ಮಾಲೂರು ತಾಲೂಕಿನ ತುರುವಾಲಹಟ್ಟಿ ಗ್ರಾಮದವರಾಗಿದ್ದಾರೆ. ಇವರ ತಂದೆ ವೆಂಕಟೇಶಪ್ಪ ಡಿಸಿಸಿ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮೀ ಕಳೆದ ಎಂಟು ವರ್ಷಗಳ ಹಿಂದೆ ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಕಾರಣ ಪೋಷಕರಿಂದ ದೂರವಿದ್ದರು ಎನ್ನಲಾಗಿದೆ.
ತಂದೆ ಹೇಳುವುದೇನು?:
ಪ್ರಕರಣಕ್ಕೆ ಸಾಕಷ್ಟು ಅನುಮಾನ ಮೂಡುವಂತೆ ಮಾಡಿದ್ದು, ಇದಕ್ಕೆ ಪೂರಕವಾಗಿ ಲಕ್ಷ್ಮೀ ತಂದೆ ವೆಂಕಟೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಗಂಡ-ಹೆಂಡತಿ ನಡುವೆ ವೈಮನಸ್ಸು ಉಂಟಾಗಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮಗಳ ಸಾವಿನ ಪ್ರಕರಣದ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ತಂದೆ ವೆಂಕಟೇಶ್, ನನಗೆ ಇಬ್ಬರ ಮೇಲೆ ಅನುಮಾನವಿದೆ. ನಿನ್ನೆ ಮಗಳು ಲಕ್ಷ್ಮೀ, ಮನೋಹರ್ ಹಾಗೂ ಪ್ರಜ್ವಲ್ ಎಂಬುವರ ಜೊತೆ ಸೇರಿ ಒಟ್ಟು 6 ಮಂದಿಯೊಂದಿಗೆ ನಾಗರಭಾವಿಯ ವಿನಾಯಕ್ ನಗರದಲ್ಲಿರುವ ಅಪಾರ್ಟ್ಮೆಂಟ್ವೊಂದರ ಮನೆಯಲ್ಲಿ ಪಾರ್ಟಿ ಮಾಡಿದ್ದಳು. ಮನೋಹರ್ ಹಾಗೂ ಪ್ರಜ್ವಲ್ ಪ್ರಕಾರ ವೇಲು ತೆಗೆದುಕೊಂಡು ಕೊಠಡಿಯೊಳಗೆ ಹೋಗಿ ಬಾಗಿಲು ಮುಚ್ಚಿದ್ದಾಳೆ. ಆ ಬಳಿಕ ತುಂಬಾ ಹೊತ್ತು ಏನೂ ಸದ್ದುಗದ್ದಲ ಇರಲಿಲ್ಲವಂತೆ. ಆಮೇಲೆ ನೋಡಿದರೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದಳು ಎಂದು ಅವರು ಹೇಳಿದ್ದಾರೆ. ಅವರಿಬ್ಬರು ಹೇಳುವುದು ಸುಳ್ಳು ಎನ್ನಿಸುತ್ತಿದೆ. ನನಗೆ ಅವರಿಬ್ಬರ ಮೇಲೆ ಅನುಮಾನ ಇದೆ. ಅವಳ ಗಂಡ ನವೀನ್ ಹೈದರಾಬಾದ್ನಲ್ಲಿ ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.