ಕೋಲಾರ: ವಸಂತ ಕಾಲದ ಸಂಭ್ರಮದ ಆರಂಭದ ಸಮಯದಲ್ಲಿ ಮಾವು ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ. ಈ ಮಧ್ಯೆ ರೋಗ ಹಾಗೂ ಕೀಟ ಬಾಧೆಯನ್ನು ತಪ್ಪಿಸಿ ಬೆಳೆ ರಕ್ಷಿಸಿಕೊಳ್ಳಲು ಮಾವು ಬೆಳೆಗಾರರು ಔಷಧಗಳ ಮೊರೆ ಹೋಗಿದ್ದಾರೆ.
ರೋಗದ ಭೀತಿ: ಔಷಧಿ ಸಿಂಪಡಣೆಗೆ ಮುಂದಾದ ಮಾವು ಬೆಳೆಗಾರರು ವಾತಾವರಣದ ಏರುಪೇರು ಹಾಗೂ ಕೀಟ ಬಾಧೆಯಿಂದ ಮಾವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು, ಎಚ್ಚೆತ್ತ ಕೆಲ ರೈತರು ಮಾವಿನ ಬೆಳೆ ಉಳಿಸಿಕೊಳ್ಳಲು ಮಾವಿನ ತೋಟಗಳಿಗೆ ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ.
ಹೂ ತೆನೆ ಕಪ್ಪಾಗುವ ರೋಗ, ಬೂದಿ ರೋಗ, ಕೀಟ ಬಾಧೆ ಹೀಗೆ ಹಲವು ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಸಲಹೆ ನೀಡಿದೆ. ಅದರಂತೆ ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದ ರೈತ ರಮೇಶ್ ತಮ್ಮ 5 ಎಕರೆ ಮಾವಿನ ತೋಟಕ್ಕೆ ಕೀಟ ಬಾಧೆ ಆವರಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಕ್ಸಾಕೋನಾ ಜೆಲ್, ಥಯೋಫಿನೇಟ್ ಮಿಥೈಲ್, ಕಾರ್ಬನ್ ಡೈಜಿಮ್ ಔಷಧಗಳನ್ನು ಸಿಂಪಡಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಸರಾಸರಿ 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಗುಣಮಟ್ಟದ ಮಾವು ಬೆಳೆಯುವ ಮಾವಿನ ತವರು ಶ್ರೀನಿವಾಸಪುರದಲ್ಲಿ ಫಸಲಿನ ನಿರೀಕ್ಷೆ ಹೆಚ್ಚಾಗಿದೆ. ಹಾಗಾಗಿ ಮಾವು ಬೆಳೆಗಾರರು ತೋಟಗಾರಿಕಾ ಇಲಾಖೆಯ ಮಾರ್ಗದರ್ಶನ ಪಡೆದು ಕೀಟ ನಿಯಂತ್ರಣ ಹಾಗೂ ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.