ಕೋಲಾರ: ತಾಲೂಕಿನ ಕುಡುವನಹಳ್ಳಿ ಗ್ರಾಮದ ಹೊರವಲಯದಲ್ಲಿ ರಸ್ತೆ ಬದಿಯ ನೀಲಗಿರಿ ತೋಪಿನಲ್ಲಿ ವ್ಯಕ್ತಿವೋರ್ವನ ಶವ ಪತ್ತೆಯಾಗಿದೆ.
ಅಸ್ತಮಾ ರೋಗಿ ಸಾವು... ನೀಲಗಿರಿ ತೋಪಿನಲ್ಲಿ ಶವ ಎಸೆದ ಆಟೋ ಚಾಲಕ - Dead body found on road
ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಟೋ ಚಾಲಕನೋರ್ವ ನೀಲಗಿರಿ ತೋಪಿನಲ್ಲಿ ಬಿಸಾಕಿ ಹೋಗಿರುವ ಅಮಾನವೀಯ ಘಟನೆ ಕೋಲಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಮುನಿವೆಂಕಟಪ್ಪ ನಿನ್ನೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬಾಡಿಗೆ ಆಟೋದಲ್ಲಿ ತೆರಳಿದ್ದ. ಚಿಕಿತ್ಸೆ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಆಟೋದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ಮಾನವೀಯತೆ ಮರೆತ ಆಟೋ ಚಾಲಕ, ಮೃತ ಮುನಿವೆಂಕಟಪ್ಪನ ಶವವನ್ನು ರಸ್ತೆ ಬದಿಯಲ್ಲಿರುವ ನೀಲಗಿರಿ ತೋಪಿನಲ್ಲಿ ಬಿಸಾಡಿ ಹೋಗಿದ್ದಾನೆ.
ಮುನಿವೆಂಕಟಪ್ಪ ಅವರಿಗೆ ಇಬ್ಬರು ಹೆಂಡತಿಯರಿದ್ದು, ವಿಷಯ ತಿಳಿದರೂ ಸಹ ಗಂಡನ ಮೃತದೇಹವನ್ನ ನೋಡಲು ಬಾರದೆ, ಮೃತ ದೇಹವನ್ನೂ ಪಡೆಯದೆ ಆತನನ್ನ ಅನಾಥವಾಗಿಸಿದ್ದಾರೆ. ಈ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳೀಯರ ನೆರವಿನಿಂದ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಮೃತ ವ್ಯಕ್ತಿಯನ್ನು ಪೊಲೀಸರು ಜನ್ನಘಟ್ಟ ಕೆರೆ ಸಮೀಪ ಜೆಸಿಬಿ ಮುಖಾಂತರ ಹಳ್ಳ ತೆಗೆದು ಅಂತ್ಯಸಂಸ್ಕಾರ ಮುಗಿಸಿದ್ದಾರೆ.