ಕೋಲಾರ:ತಾಲೂಕಿನ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುರಗಲ್ ಗ್ರಾಮದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ.
ಕುರುಗಲ್ ಗ್ರಾಮದ ಮನೋಜ್ (20) ಮೃತ ಯುವಕ. ಗಾರೆ ಕೆಲಸ ಮಾಡುತ್ತಿದ್ದ ಈತ, ನಿನ್ನೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ. ಹೀಗೆ ಬಂದವ, ಹಣದ ವಿಚಾರವಾಗಿ ಸ್ನೇಹಿತರು ಕರೆ ಮಾಡುತ್ತಿದ್ದಾರೆ ಎಂದು ಹೇಳಿ ಮನೆಯಿಂದ ಹೊರ ಹೋಗಿದ್ದ. ರಾತ್ರಿಯಾದರೂ ಮನೋಜ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಕರೆ ಮಾಡಿದ್ದರು. ಈ ವೇಳೆ ಮನೋಜ್ ಮೊಬೈಲ್ ಸ್ವಿಚ್ ಅಫ್ ಆಗಿತ್ತು. ಇಂದು ಬೆಳಗ್ಗೆ ಕೈಗಾರಿಕಾ ಪ್ರದೇಶದ ಬಳಿ ಶವವಾಗಿ ಪತ್ತೆಯಾಗಿದ್ದಾನೆ.
ಯುವಕನ ಹಣೆ ಮತ್ತು ಕಾಲುಗಳ ಮೇಲೆ ಗಾಯಗಳು ಕಂಡು ಬಂದಿವೆ. ಸ್ಥಳೀಯರ ಮಾಹಿತಿ ಪ್ರಕಾರ, ಗ್ರಾಮ ಮತ್ತು ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಯತೇಚ್ಚವಾಗಿ ಮದ್ಯ, ಗಾಂಜಾ ಮಾರಾಟ ಮತ್ತು ಸೇವನೆ ವ್ಯಾಪಕವಾಗಿ ನಡೆಯುತ್ತಿದೆ. ಇದರೊಂದಿಗೆ ಶವ ಪತ್ತೆಯಾದ ಪ್ರದೇಶದಲ್ಲಿ ವ್ಯಾಪಕವಾದ ಜೂಜು ಅಡ್ಡೆಗಳು ನಡೆಯುತ್ತಿವೆ.