ಕೋಲಾರ :ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ನಗರ ಪ್ರದಕ್ಷಿಣೆ ಹಾಕಿದ್ದು, ನನೆಗುದಿಗೆ ಬಿದ್ದಿರುವ ರಸ್ತೆ, ಚರಂಡಿ ಕಾಮಗಾರಿ ಶೀಘ್ರ ಮುಗಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿನ ರಹಮತ್ ನಗರ, ಅರಹಳ್ಳಿಗೇಟ್, ಟೋಲ್‍ಗೇಟ್ ಸಮೀಪ ಹದಗೆಟ್ಟಿರುವ ರಸ್ತೆಗಳನ್ನು ವೀಕ್ಷಿಸಿದ ಅವರು, ಅಂಗಡಿ ಮಾಲೀಕರು, ಹೋಟೆಲ್ ಮಾಲೀಕರು ಫುಟ್‍ಪಾತ್ ಒತ್ತುವರಿ ಮಾಡಿಕೊಂಡಿರುವುದನ್ನು ಕಂಡು ಕೆಂಡಾಮಂಡಲರಾದರು.
ಮುಖ್ಯರಸ್ತೆಯ ಪಕ್ಕದಲ್ಲೇ ಕಸದ ರಾಶಿ ಕಂಡ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ನಾವೇನು ಕೆಲಸವಿಲ್ಲದೆ ರಸ್ತೆಗಳನ್ನು, ಚರಂಡಿಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ. ನಮ್ಮ ಅಧಿಕಾರಿಗಳು ಮನೆಮನೆಗೆ ಬಂದು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಸಾಧ್ಯವಿಲ್ಲ, ಜನರೇ ಸ್ವಯಂ ಪ್ರೇರಿತರಾಗಿ ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಡ್ಡಾಯವಾಗಿ ಕಸದ ಬುಟ್ಟಿಗಳನ್ನು ಇಟ್ಟುಕೊಂಡು ನಗರಸಭೆಯ ಕಸದ ವಾಹನ ಬಂದಾಗ ಕೊಡಬೇಕು ಎಂದು ಮಾಲೀಕರಿಗೆ ತಾಕೀತು ಮಾಡಿದರು.