ಕರ್ನಾಟಕ

karnataka

ETV Bharat / state

ಕೋಲಾರ: ರಾಜ್ಯೋತ್ಸವಕ್ಕೆ ಸಚಿವ ಭೈರತಿ ಸುರೇಶ್​ ಗೈರು; ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ

Karnataka Rajyotsava celebration in Kolar: ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್​ ಗೈರು ಹಾಜರಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

Karnataka Rajyotsava
ಕರ್ನಾಟಕ ರಾಜ್ಯೋತ್ಸವ: ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್​ ಗೈರು, ರಾಷ್ಟ್ರ ಧ್ವಜಾರೋಹಣ ಮಾಡಿದ ಜಿಲ್ಲಾಧಿಕಾರಿ..

By ETV Bharat Karnataka Team

Published : Nov 1, 2023, 1:10 PM IST

Updated : Nov 1, 2023, 2:42 PM IST

ಕೋಲಾರ: ರಾಜ್ಯೋತ್ಸವಕ್ಕೆ ಸಚಿವ ಭೈರತಿ ಸುರೇಶ್​ ಗೈರು; ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ

ಕೋಲಾರ:ಗಡಿನಾಡು ಕೋಲಾರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮಂಕಾಗಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್​ ಕಾರ್ಯಕ್ರಮ ಗೈರು ಹಾಜರಾಗಿದ್ದರು. ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಬದಲಾವಣೆ ಗಮನಿಸಿದ ಜಿಲ್ಲಾಧಿಕಾರಿ ಗೌರವವಂದನೆ ಸ್ವೀಕರಿಸಿದರು.

ನಗರದ ಜೂನಿಯರ್​ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜವೇ ಮಾಯವಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳಿಗೆ ಆಸನದ ವ್ಯವಸ್ಥೆ ಇರಲಿಲ್ಲ. ವೇದಿಕೆ ಮೇಲಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಪಾಡಿಗೆ ತಾವು ಮೊಬೈಲ್​ ನೋಡುತ್ತಾ ಮೈಮರೆತಿದ್ದು ದೃಶ್ಯ ಕಂಡುಬಂತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲಾ ಮಟ್ಟದ ಸಾಧಕರನ್ನು ಸನ್ಮಾನಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಕೊತ್ತೂರು ಮಂಜುನಾಥ್, ಕಾರ್ಯಕ್ರಮದಲ್ಲಿನ ಅವ್ಯವಸ್ಥೆಯನ್ನು ಒಪ್ಪಿಕೊಂಡು ಮುಂದಿನ ವರ್ಷ ಅದ್ಧೂರಿಯಾಗಿ ಕಾರ್ಯಕ್ರಮ ಮಾಡುವುದಾಗಿ ಹೇಳಿದರು.

ಸಿದ್ದರಾಮಯ್ಯ 5 ವರ್ಷ ಸಿಎಂ- ಕೊತ್ತೂರು ಮಂಜುನಾಥ್:''ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ. ಬದಲಾವಣೆ ಪ್ರಶ್ನೆಯೇ ಇಲ್ಲ, ನಮ್ಮ ಪಕ್ಷದವರು ಯಾರೂ ಸಿಎಂ ಬದಲಾವಣೆ ಮಾತನಾಡಿಲ್ಲ'' ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

ರಾಜ್ಯೋತ್ಸವದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಇರ್ತಾರೆ. ಎರಡು ವರ್ಷದ ನಂತರ ಸಿಎಂ ಬದಲಾವಣೆ ಮಾಡುವ ಶಕ್ತಿ ಇರುವುದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ. ಆದರೆ ಬದಲಾವಣೆ ಎನ್ನುವುದು ಎಲ್ಲವೂ ಸುಳ್ಳು'' ಎಂದರು.

ಶಾಸಕರಲ್ಲಿ ಅಸಮಾಧಾನ ಇದೆ ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ''ಸಚಿವ ಸ್ಥಾನ ಬೇಕು ಎನ್ನುವಂತಹವರು, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮನೆಯಲ್ಲಿ ಇರಲಿ. ನಮ್ಮನ್ನು ಜನರು ಗೆಲ್ಲಿಸಿರುವುದು ಜನರ ಸೇವೆ ಮಾಡುವುದಕ್ಕೆ'' ಎಂದು ಟಾಂಗ್ ನೀಡಿದರು. ''ನಾವು 136 ಜನ ಶಾಸಕರಿದ್ದೇವೆ. ಸರ್ಕಾರ ಬೀಳುವ ಕನಸು ಯಾರೂ ಕಾಣೋದು ಬೇಡ'' ಎಂದ ಅವರು, ''ಆಪರೇಷನ್ ಕಮಲನೂ ಇಲ್ಲ, ಮರನೂ ಇಲ್ಲ, ಗಿಡವೂ ಇಲ್ಲ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

''ರವಿ ಗಣಿಗ ಅವರಿಗೆ ಆಫರ್ ಮಾಡಿರುವುದು ನನಗೆ ಗೊತ್ತಿಲ್ಲ. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನನ್ನ ತಗೋಳೋ ಶಕ್ತಿ ಯಾರಿಗೂ ಇಲ್ಲ. ಇನ್ನೂ ನನ್ನ ರೇಟ್ ಬೇರೆ ಇದೆ. ಕರ್ನಾಟಕದಲ್ಲೇ ನನ್ನನ್ನು ತಗೊಳೋ ಶಕ್ತಿ ಯಾರಿಗೂ ಇಲ್ಲ. ನನ್ನ ಹತ್ತಿರ ಯಾರೂ ಬರಲ್ಲ, ಹಂಗೇನಾದ್ರೂ ನನಗೆ ಬೆಲೆ ಕಟ್ಟಿದ್ರೆ ಕರ್ನಾಟಕವನ್ನೇ ಬರೆದು ಕೊಡಬೇಕೆಂದರು. ಕೋಲಾರಮ್ಮನ ಆಣೆಗೂ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ'' ಎಂದು ಮತ್ತೊಮ್ಮೆ ಸ್ಪಷ್ಪಪಡಿಸಿದರು.

ಇದನ್ನೂ ಓದಿ:ಇಂದಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿದ್ಯುತ್, ಕುಡಿಯುವ ನೀರು ಉಚಿತ: ಸಿಎಂ ಸಿದ್ದರಾಮಯ್ಯ ಘೋಷಣೆ

Last Updated : Nov 1, 2023, 2:42 PM IST

ABOUT THE AUTHOR

...view details