ಕರ್ನಾಟಕ

karnataka

ETV Bharat / state

ಬರಗಾಲದ ನಡುವೆಯೂ ಕೋಲಾರ ಹೈನೋದ್ಯಮಿಗಳ ಮೊಗದಲ್ಲಿ ಮಂದಹಾಸ... ಹೇಗೆ ಗೊತ್ತಾ! - undefined

ಕೋಲಾರದಲ್ಲಿ ಭೀಕರ ಬರಪರಿಸ್ಥಿತಿಯಲ್ಲೂ ಹಾಲಿನ ಹೊಳೆ ಹರಿಯುತ್ತಿದ್ದು, ಹೈನೋದ್ಯಮವನ್ನ ನಂಬಿ ಬದುಕುತ್ತಿರುವ ರೈತರಿಗೆ ಹಾಲು ಒಕ್ಕೂಟ ಹಾಗೂ ಜಿಲ್ಲಾಡಳಿತ ಬೆಂಬಲವಾಗಿ ನಿಂತಿದೆ.

ಕೋಲಾರ ಹೈನೋದ್ಯಮಿಗಳ ಮೊಗದಲ್ಲಿ ಮಂದಹಾಸ

By

Published : Mar 27, 2019, 11:47 PM IST

ಕೋಲಾರ : ಈ ಬಾರಿಯ ಭೀಕರ ಬರಗಾಲ ರೈತರನ್ನ ಕಂಗಾಲಾಗುವಂತೆ ಮಾಡಿದೆ. ಅದರಲ್ಲೂ ಬಯಲು ಸೀಮೆಯ ಪರಿಸ್ಥಿತಿಯನ್ನು ಊಹೆ ಮಾಡಿಕೊಳ್ಳೋದು ಕಷ್ಟಕರವಾಗಿದೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಹಾಗೂ ಕೋಚಿಮುಲ್ ಹಾಲು ಒಕ್ಕೂಟ ಗೋಪಾಲಕರ ಬೆಂಬಲಕ್ಕೆ ನಿಂತಿದೆ. ಸಹಾಯ ಧನ, ಪ್ರೋತ್ಸಾಹ ಧನ ನೀಡಿ ಬರ ನಿರ್ವಹಣೆ ಮಾಡುತ್ತಿದೆ.

ಕೋಲಾರ ಜಿಲ್ಲೆಯಲ್ಲಿ ಹೈನೋದ್ಯಮವೇ ಪ್ರಮುಖ ಕಸುಬಾಗಿದೆ. ನದಿನಾಲೆಗಳಿಲ್ಲದೆ ಸದಾ ಬರಗಾಲದ ಹಣೆಪಟ್ಟಿ ಕಟ್ಟಿಕೊಂಡಿರುವ ಕೋಲಾರದಲ್ಲಿ ಮಳೆ ಕೈಕೊಟ್ರು, ಬೆಳೆ ಕೈಸುಟ್ಟರೂ, ಹೈನೋದ್ಯಮ ಮಾತ್ರ ಜಿಲ್ಲೆಯ ರೈತರ ಕೈ ಹಿಡಿದಿದೆ. ಆ ಮೂಲಕ ರಾಜ್ಯದಲ್ಲೇ ಹಾಲು ಉತ್ಪಾದನೆಯಲ್ಲಿ ಕೋಲಾರ ಎರಡನೇ ಸ್ಥಾನದಲ್ಲಿದೆ. ಹೀಗಿರುವಾಗಲೇ ಈ ವರ್ಷ ಮುಂಗಾರು-ಹಿಂಗಾರು ಮಳೆ ಕೈಕೊಟ್ಟು ತೀವ್ರ ಬರಪರಿಸ್ಥಿತಿ ಆವರಿಸಿ ಜಾನುವಾರುಗಳು ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಬರ ಪರಿಸ್ಥಿತಿ ನಿರ್ವಹಣೆ ಮಾಡುವ ದೃಷ್ಟಿಯಿಂದ ಸರ್ಕಾರ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ, ಹಾಲು ಉತ್ಪಾದಕರಿಗೆ ಬರಗಾಲದ ಸಹಾಯಧನವಾಗಿ ಲೀಟರ್ ಒಂದಕ್ಕೆ ಎರಡು ರೂಪಾಯಿ ನೀಡುತ್ತಿದೆ.

ಈಗಾಗಲೆ ಲೀಟರ್ ಹಾಲಿಗೆ 5 ರೂಪಾಯಿ ನೀಡುತ್ತಿರುವ ಒಕ್ಕೂಟ, ಬರಗಾಲ ತೀವ್ರವಾದ ಹಿನ್ನೆಲೆಯಲ್ಲಿ ಹೈನೋದ್ಯಮವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೆ 2 ರೂಪಾಯಿ ಸಹಾಯಧನ ನೀಡಲು ಮುಂದಾಗಿದೆ. ಈ ಮೂಲಕ ಕೋಲಾರ ಹಾಲು ಒಕ್ಕೂಟ ಬರೋಬ್ಬರಿ 10 ಕೋಟಿ ರೂಪಾಯಿಯನ್ನು ಬರಗಾಲ ನಿರ್ವಹಣೆಗೆಂದು ಮೀಸಲಿಟ್ಟಿದೆ.

ಕೋಲಾರ ಹೈನೋದ್ಯಮಿಗಳ ಮೊಗದಲ್ಲಿ ಮಂದಹಾಸ


ಕೆಲ ರೈತರ ವಿರೋಧ...

ಇನ್ನು ಸರ್ಕಾರ ಹಾಗೂ ಹಾಲು ಒಕ್ಕೂಟ ರೈತರಿಗೆ ಕೇವಲ 2 ರೂಪಾಯಿ ಸಹಾಯಧನವನ್ನು ನೀಡಿ ಕೈತೊಳೆದುಕೊಂಡಿಲ್ಲ. ಬದಲಾಗಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ, ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಸಿರು ಮೇವು ಬೆಳೆಸಲು ಮುಂದಾಗಿದೆ. ಹಸಿರು ಮೇವು ಬೆಳೆಯುವ ರೈತರಿಗೆ ಎಕರೆಯೊಂದಕ್ಕೆ 3000 ರೂ. ಮೇವು ಬೆಳೆಯಲು ಸಹಾಯಧನ ನೀಡುತ್ತಿದೆ. ಜೊತೆಗೆ ಒಕ್ಕೂಟದಿಂದ ನೀಡುವ ಪಶು ಆಹಾರದ ಮೇಲೂ ಶೇ.50 ರಷ್ಟು ರಿಯಾಯಿತಿ ನೀಡುತ್ತಿದೆ. ಇದರಿಂದ ಬರಗಾಲದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗದಂತೆ ಎಚ್ಚರ ವಹಿಸಿದೆ. ಆದ್ರೆ ಸರ್ಕಾರ ಹಾಗೂ ಹಾಲು ಒಕ್ಕೂಟದ ಈ ಕಾರ್ಯಕ್ಕೆ ಜಿಲ್ಲೆಯಲ್ಲಿ ವಿರೋಧಗಳು ಕೇಳಿಬಂದಿವೆ. ಬರಗಾಲದ ಹೆಸರಲ್ಲಿ ರೈತರಿಗೆ ನೀಡುತ್ತಿರುವ ಸಹಾಯಧನ ಕೆಲವೆ ಕೆಲವರ ಪಾಲಾಗುತ್ತಿದ್ದು, ಸಮರ್ಪಕವಾಗಿ ರೈತರಿಗೆ ತಲಪುತ್ತಿಲ್ಲ. ಹಾಲು ಉತ್ಪಾದಕರ ಸಹಕಾರ ಸಂಘಗಳ ಕುಟುಂಬ ಸದಸ್ಯರ ಅಕೌಂಟ್‍ಗಳಿಗೆ ಸೇರುತ್ತಿದೆ. ಹಾಲಿನ ಬಿಲ್ ಜೊತೆಗೆ ಸಹಾಯ ಧನ ನೀಡಿದ್ರೆ ರೈತರಿಗೆ ತಲುಪತ್ತೆ ಅಂತಾರೆ ಸ್ಥಳೀಯ ರೈತ ಮುಖಂಡರು.

ಒಟ್ಟಿನಲ್ಲಿ ಬರದ ನಾಡು ಕೋಲಾರದಲ್ಲಿ ಭೀಕರ ಬರಪರಿಸ್ಥಿತಿಯಲ್ಲೂ ಹಾಲಿನ ಹೊಳೆ ಹರಿಯುತ್ತಿದ್ದು, ಹೈನೋದ್ಯಮವನ್ನ ನಂಬಿ ಬದುಕುತ್ತಿರುವ ರೈತರಿಗೆ ಹಾಲು ಒಕ್ಕೂಟ ಹಾಗೂ ಜಿಲ್ಲಾಡಳಿತ ಬೆಂಬಲವಾಗಿ ನಿಂತಿದೆ. ಈ ಸಹಾಯಧನ ಕೆಲವರ ಜೇಬು ತುಂಬುವ ಬದಲಾಗಿ, ರೈತರ ಕೈ ಸೇರಿದ್ರೆ ಮಾತ್ರ ಇದಕ್ಕೆ ಬೆಲೆ ಸಿಗುತ್ತೆ.

For All Latest Updates

TAGGED:

ABOUT THE AUTHOR

...view details