ಕರ್ನಾಟಕ

karnataka

ETV Bharat / state

ಕೋಲಾರ: ತಾಯಿಯ ಸಮಾಧಿ ಬಳಿ ಆತ್ಮಹತ್ಯೆ ಮಾಡಿಕೊಂಡ ಮಗ - ವಿದ್ಯಾರ್ಥಿನಿ ಆತ್ಮಹತ್ಯೆ

ತಾಯಿಯ ಸಮಾಧಿಯ ಬಳಿಯೇ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ.

ತಾಯಿಯ ಸಮಾಧಿ ಬಳಿ ಮಗ ಆತ್ಮಹತ್ಯೆ
ತಾಯಿಯ ಸಮಾಧಿ ಬಳಿ ಮಗ ಆತ್ಮಹತ್ಯೆ

By ETV Bharat Karnataka Team

Published : Aug 26, 2023, 3:59 PM IST

ಕೋಲಾರ:ಯುವಕನೋರ್ವ ತನ್ನ ತಾಯಿ ಸಮಾಧಿ ಬಳಿ ಆತ್ಮಹತ್ಯೆ‌ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಕ್ರಾಸ್​ನಲ್ಲಿ ನಡೆದಿದೆ. ತಾಡಿಗೋಳ್ ಗ್ರಾಮದ ಪ್ರವೀಣ್ (22) ಎಂಬಾತ ಆತ್ಮಹತ್ಯೆಗೆ ಶರಣಾಗಿರುವ ಯುವಕ.

ಇನ್ನು ಆತ್ಮಹತ್ಯೆ ಮಾಡಿಕೊಂಡ ಯುವಕ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕೆಲವು ದಿನಗಳ ಹಿಂದೆ ಸಂಬಂಧಿಕರ ಮದುವೆಗೆ ಎಂದು ಗ್ರಾಮಕ್ಕೆ ಬಂದಿದ್ದ. ತಾಯಿಯನ್ನು ಕಳೆದುಕೊಂಡಿರುವ ಯುವಕ ತನ್ನ ತಾಯಿ ಸಮಾಧಿ ಇರುವಂತಹ ಸ್ಥಳದಲ್ಲಿಯೇ ಸಾವಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಸ್ಥಳಕ್ಕೆ ಶ್ರೀನಿವಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಗೂಲಿ ನೌಕರ ಆತ್ಮಹತ್ಯೆ:ಶಿವಮೊಗ್ಗದ ಚಂದ್ರಗುತ್ತಿ ದೇವಾಲಯದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಣಪತಿ ತಾವರೆಹಳ್ಳಿ(40) ಆತ್ಮಹತ್ಯೆ ಮಾಡಿಕೊಂಡ ದಿನಗೂಲಿ ನೌಕರ. ಗಣಪತಿ ಅವರು ರಾಜ್ಯದ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಚಂದ್ರಗುತ್ತಿಯ ರೇಣುಕಾಂಬ ದೇವಾಲಯದಲ್ಲಿ ಹಲವಾರು ವರ್ಷಗಳಿಂದ ದಿನಗೂಲಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದರು. ಗಣಪತಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಅವರು ಸಾಕಷ್ಟು ಮಾನಸಿಕವಾಗಿ ನೊಂದಿದ್ದರು. ತಮ್ಮ ಅನಾರೋಗ್ಯದ ಬಗ್ಗೆ ಸಾಕಷ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಸಹ ಆರೋಗ್ಯ ಸರಿ ಆಗಿರಲಿಲ್ಲ. ಇದರಿಂದ ಸಾಕಷ್ಟು ಬೇಸರಗೊಂಡಿದ್ದರು. ಇತ್ತೀಚೆಗೆ ಕೆಲಸಕ್ಕೂ ಸರಿಯಾಗಿ ಹೋಗುತ್ತಿರಲಿಲ್ಲ. ಇನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾವಿಗೆ ಶರಣಾಗಿದ್ದಾರೆ. ಕುಟಂಬಸ್ಥರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿ ಆತ್ಮಹತ್ಯೆ:ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ (ಆ.24) ನಡೆದಿತ್ತು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಳು. ದೇವದುರ್ಗ ತಾಲೂಕಿನ ಬೋಗಿರಾಮನಗುಂಡ ಗ್ರಾಮದ ನಿವಾಸಿಯಾಗಿದ್ದ ವಿದ್ಯಾರ್ಥಿನಿ ಕಿತ್ತೂರು ರಾಣಿ ಚನ್ನಮ್ಮ ವಸತಿಯಲ್ಲಿ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಳು. ಆದರೆ ನಿನ್ನೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಡಿಎಸ್​ಪಿ ಮಂಜುನಾಥ, ಜಿಲ್ಲಾ ಪರಿಶಿಷ್ಟ ಪಂಗಡ ಅಧಿಕಾರಿ ರಾಜೇಂದ್ರ ಜಲ್ದರ್, ಗ್ರಾಮೀಣ ಸಿಪಿಐ ಗುಂಡೂರಾವ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಖಾಸಗಿ ಕಾಲೇಜು ವಿದ್ಯಾರ್ಥಿ ಮೇಲೆ ಮತ್ತೊಂದು ಕಾಲೇಜಿನ ವಿದ್ಯಾರ್ಥಿಗಳಿಂದ ಹಲ್ಲೆ: ಒಬ್ಬನ ಬಂಧನ

ABOUT THE AUTHOR

...view details