ಕೋಲಾರ :ಕೊರೊನಾ ಮಹಾಮಾರಿ ಅದ್ಯಾವ ರೀತಿ ಜನರನ್ನು ಚಿತ್ರ ವಿಚಿತ್ರವಾಗಿ ಹಿಂಸಿಸುತ್ತಿದೆ ಅಂದ್ರೆ ಹೇಳೋದಕ್ಕೆ ಅಸಾಧ್ಯ. ಕೋಲಾರದಲ್ಲಿ ಕೊರೊನಾ ಸೋಂಕಿತರು ಕೆಲವೇ ಮಂದಿಯಾದ್ರೂ ಈ ವೈರಸ್ ಸೋಂಕಿತರ ಮನೆ ಹಾಗೂ ಕುಟುಂಬಗಳ ಮೇಲೆ ದಾಳಿ ಮಾಡ್ತಿದೆ. ಇದರಿಂದ ಸೋಂಕಿತರು ಕುಟುಂಬ ಸಮೇತರಾಗಿ ಕೋವಿಡ್-19 ಆಸ್ಪತ್ರೆಗೆ ಹೋಗಿ ದಾಖಲಾಗುವ ಪರಿಸ್ಥಿತಿ ಎದುರಾಗಿದೆ.
ಕೊರೊನಾ ಸೋಂಕಿತರು ಒಂದೊಂದು ಕಡೆ ಒಂದೊಂದು ರೀತಿ ಸಿಗುತ್ತಿದ್ದಾರೆ. ಸೋಂಕು ತಗುಲಿದೆ ರೀತಿಯೂ ಕೂಡಾ ವಿಭಿನ್ನವಾಗಿರುತ್ತದೆ. ಸದ್ಯ ಜಿಲ್ಲೆಯಲ್ಲಿ ಈವರೆಗೆ 28 ಮಂದಿ ಸೋಂಕು ದೃಢಪಟ್ಟಿದೆ. ಕೋಲಾರ ನಗರ, ಬಂಗಾರಪೇಟೆ ಮತ್ತು ಮುಳಬಾಗಿಲಿನ 4 ಸೋಂಕಿತ ಪ್ರಕರಣ ಗಮನಿಸಿದಾಗ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವ ತಮ್ಮ ಪತ್ನಿಯರಿಗೆ ಸೋಂಕು ಕಾಣಿಸಿದೆ. ಇದರಿಂದಾಗಿ ಸೋಂಕಿತರು ಕುಟುಂಬ ಸಮೇತರಾಗಿ ಮನೆ, ಮಕ್ಕಳನ್ನು ಬಿಟ್ಟು ಕೋವಿಡ್-19 ಆಸ್ಪತ್ರೆಗೆ ಹೋಗಿ ದಾಖಲಾಗುವ ಪರಿಸ್ಥಿತಿ ಎದುರಾಗಿದೆ.
ದುರಂತ ಅಂದ್ರೆ ಈ ನಾಲ್ವರು ಸೋಂಕಿತರ ಪೈಕಿ ಯಾರಲ್ಲೂ ಕೂಡಾ ಕೊರೊನಾ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ. ಹೀಗಿದ್ರೂ ಕೊರೊನಾ ಸೋಂಕು ಮಾತ್ರ ಇವರನ್ನು ಬಿಟ್ಟು ಬಿಡದೆ ಕಾಡಿಸುತ್ತಿದೆ. ಇದರಲ್ಲಿ ಮೂರು ಪ್ರಕರಣ ಚೆನ್ನೈನಿಂದ ಬಂದವರಾಗಿದ್ದಾರೆ. ಪ್ರಾಥಮಿಕ ಸಂಪರ್ಕ ಹೊಂದಿದ್ದವರಲ್ಲಿ ಬಹುಬೇಗ ಸೋಂಕು ಹರಡಿದೆ ಅನ್ನೋದು ತಿಳಿದು ಬಂದಿದೆ.