ಕೋಲಾರ:ಪ್ರೀತಿಸಿ ಮದುವೆಯಾದ ಜೋಡಿ ತಾವಂದುಕೊಂಡಂತೆ ಸಂಸಾರ ಮಾಡಲಾಗಲಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕು ಮುಗಳಬೆಲೆ ಗ್ರಾಮದಲ್ಲಿ ನಡೆದಿದೆ.
ಮಾಲೂರು ತಾಲೂಕು ದ್ಯಾಪಸಂದ್ರದ ರೂಪಾ ಎಂಬಾಕೆಯನ್ನು ಬಂಗಾರಪೇಟೆ ತಾಲೂಕು ಕಾರಹಳ್ಳಿ ಗ್ರಾಮಕ್ಕೆ ಎಂಟು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ರು. ಆಕೆಗೆ ಒಂದು ಹೆಣ್ಣು ಮಗು ಕೂಡ ಇತ್ತು. ಹೀಗಿರುವಾಗಲೇ ತನ್ನ ಗಂಡ ಸರಿ ಇಲ್ಲ ಎಂದು ನೊಂದುಕೊಂಡಿದ್ದ ರೂಪಾಗೆ ನಿತ್ಯ ಕೆಲಸಕ್ಕೆ ಹೋಗಿ ಬರುತ್ತಿದ್ದ ವೇಳೆ ರೈಲಿನಲ್ಲಿ ಅದೇ ಬಂಗಾರಪೇಟೆ ತಾಲೂಕು ಮಾದಮಂಗಲ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಸುರೇಶ ಎಂಬುವನ ಪರಿಚಯವಾಗಿತ್ತಂತೆ.
ಪ್ರೀತಿಸಿ ಮದುವೆಯಾದ ಜೋಡಿ ಆತ್ಮಹತ್ಯೆ ಪರಿಚಯ ಪ್ರೇಮವಾಗಿ ತಿರುಗಿ, ಕಳೆದ ಒಂದೂವರೆ ವರ್ಷದ ಹಿಂದೆ ತನ್ನ ಗಂಡನನ್ನು ಬಿಟ್ಟು ಬಂದ ರೂಪಾ ಸುರೇಶನೊಂದಿಗೆ ಮದುವೆಯಾಗಿದ್ದಳು. ಆದ್ರೆ ಹದಿನೈದು ದಿನದ ಹಿಂದೆ ರೂಪ ತನ್ನ ತಂದೆ ಮನೆಗೆ ಹೋಗಿ ಬರ್ತೀನಿ ಎಂದು ದ್ಯಾಪಸಂದ್ರಕ್ಕೆ ಹೋಗಿದ್ದಳಂತೆ. ಆದ್ರೆ ಇದ್ದಕ್ಕಿದಂತೆ ನಿನ್ನೆ ಮಧ್ಯಾಹ್ನ ತಂದೆ ಮನೆಗೆ ಹೋಗಿದ್ದ ರೂಪಾಳನ್ನು ಕೆರೆದುಕೊಂಡು ಬರ್ತೀನಿ ಎಂದು ಹೋದ ಸರೇಶ್ ಮತ್ತೆ ರಾತ್ರಿ ಮನೆಗೆ ಬಂದಿಲ್ಲ. ಆದ್ರೆ ಬೆಳಗ್ಗೆ ಮುಗಳಬೆಲೆ ಗ್ರಾಮದ ಬಳಿ ಇಬ್ಬರೂ ಒಂದೇ ವೇಲಿನಿಂದ ಕಟ್ಟಿಕೊಂಡು ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಸುರೇಶ್ ತಾನು ಪ್ರೀತಿಸಿದ ರೂಪಾಳ ಜೊತೆ ಮದುವೆಯಾಗಿಲ್ಲ ಎಂದು ಮನೆಯವರ ಬಳಿ ಸುಳ್ಳು ಹೇಳಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದ. ಆದ್ರೆ ಮದುವೆಯಾದ ಮೇಲೂ ಇಬ್ಬರ ನಡುವೆ ಅಷ್ಟೊಂದು ಅನ್ಯೋನ್ಯತೆ ಇರಲಿಲ್ಲ. ಹೀಗಿರುವಾಗಲೇ ರೂಪಾ ತಂದೆಗೂ ಇವರ ಕುಟುಂಬಕ್ಕೂ ಅಷ್ಟಾಗಿ ಹೊಂದಾಣಿಕೆಯಾಗಿರಲಿಲ್ಲ ಅನ್ನೋ ವಿಚಾರವಾಗಿ ಆಗಿಂದಾಗ್ಗೆ ಜಗಳ ಕೂಡ ನಡೆದಿತ್ತಂತೆ. ಹದಿನೈದು ದಿನದ ಹಿಂದೆ ತಂದೆ ಮನೆಗೆ ಹೋದ ರೂಪಾಳಿಗೆ ಏನಾಯ್ತೋ ಅನ್ನೋದು ತಿಳಿದಿಲ್ಲ. ಆದ್ರೆ ನಿನ್ನೆ ಮದ್ಯಾಹ್ನ ಗಾರೆ ಕೆಲಸ ಮಾಡಿಕೊಂಡಿದ್ದ ಸುರೇಶ್ ಇದ್ದಕ್ಕಿದಂತೆ ಹೆಂಡತಿಯನ್ನು ಕರೆದುಕೊಂಡು ಬರುತ್ತೇನೆಂದು ಹೇಳಿ ಹೋದವನು ಹೀಗೆ ಬೆಳಗ್ಗೆ ವೇಳೆಗೆ ಹೆಂಡತಿ ಜೊತೆ ಆತ್ಮಹತ್ಯೆ ಶರಣಾಗಿದ್ದಾನೆ ಎನ್ನಲಾಗಿದೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಭೇಟಿ ಕೊಟ್ಟ ಬಂಗಾರಪೇಟೆ ಪೊಲೀಸರು, ಶವಗಳನ್ನು ಹೊರ ತೆಗೆದು ಪರಿಶೀಲನೆ ನಡೆಸಿದ್ದಾರೆ.