ಕೋಲಾರ: ಇಲ್ಲಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ನೇತೃತ್ವದಲ್ಲಿ, ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳನ್ನೊಳಗೊಂಡ ಸಾಮಾನ್ಯ ಸಭೆ ನಡೆಸಲಾಯಿತು.
ಕೋಲಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದ ಸಾಮಾನ್ಯ ಸಭೆಯಲ್ಲಿ, ಸರ್ಕಾರದಿಂದ ಶಿಕ್ಷಣ ಇಲಾಖೆಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಗೋಲ್ಮಾಲ್ ನಡೆದಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಆರೋಪಿಸಿದರು. ಅಲ್ಲದೇ ಜಿಲ್ಲೆಯಾದ್ಯಂತ ಹಾಸ್ಟೆಲ್ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಹಳೆಯ ಕಟ್ಟಡಗಳಲ್ಲಿ ವಿದ್ಯಾರ್ಥಿಗಳು ಕಾಲಕಳೆಯುತ್ತಿದ್ದಾರೆಂದು ದೂರಿದರು.
ಇನ್ನು ಗಡಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಇತ್ತೀಚೆಗೆ ಕೃಷಿ ಹೊಂಡಗಳಲ್ಲಿ ಬಿದ್ದು ಮಕ್ಕಳು ಹಾಗೂ ರೈತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಕೋಲಾರ ಶಾಸಕ ಶ್ರೀನಿವಾಸ್‌ಗೌಡ, ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.