ಕೋಲಾರ: ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಡಿ ನಿರ್ಗಮಿತ ತಹಶೀಲ್ದಾರ್ ಶೋಭಿತ ಹಾಗೂ ಅವರ ಪೋಷಕರ ವಿರುದ್ಧ ನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗಷ್ಟೇ ಕೋಲಾರದಿಂದ ವರ್ಗಾವಣೆ ಆಗಿದ್ದ ತಹಶೀಲ್ದಾರ್ ಶೋಭಿತ ಅವರು, ತಮ್ಮ ತಂದೆ ತಾಯಿಗೆ 60 ವರ್ಷ ತುಂಬಿದ ಹಿನ್ನೆಲೆ ಷಷ್ಟಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳನ್ನ ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗಿತ್ತು. ಅಲ್ಲದೆ ಈ ಕುರಿತು ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದರಿಂದ ನೆಟ್ಟಿಗರು ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಜೊತೆಗೆ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಅವರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ತಹಶೀಲ್ದಾರ್ ಶೋಭಿತ ಹಾಗೂ ಅವರ ಪೋಷಕರ ವಿರುದ್ಧ ಐ.ಪಿ.ಸಿ 1860(u/s-269,270,188) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಈ ಹಿಂದೆಯೂ ಸಹ ಮಾಜಿ ಸಚಿವ ಆರ್. ವರ್ತೂರು ಪ್ರಕಾಶ್ ಅವರು ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸಂಬಂಧ, ಕಾರ್ಯಕರ್ತರಿಗೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಿದ್ದರು. ಈ ವೇಳೆ ಕೋವಿಡ್ ನಿಯಮಗಳನ್ನ ಉಲ್ಲಂಘನೆ ಮಾಡಲಾಗಿತ್ತು. ಅಲ್ಲದೆ, ಮಾಜಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.