ಕರ್ನಾಟಕ

karnataka

ETV Bharat / state

ಕೋಲಾರ: ಸ್ಥಳೀಯ ಪ್ರಭಾವಿ ಕಾಂಗ್ರೆಸ್​​ ಮುಖಂಡನ ಬರ್ಬರ ಹತ್ಯೆ; ಮೂರೇ ದಿನದಲ್ಲಿ ಇಬ್ಬರು ಕೊಲೆ - ಹಳೆಯ ದ್ವೇಷ

ಕೋಲಾರದ ಹೊಗಳಗೆರೆ ರಸ್ತೆಯಲ್ಲಿರುವ ತೋಟದ ಸಮೀಪ ಕಾಂಗ್ರೆಸ್​ನ ಸ್ಥಳೀಯ ಪ್ರಭಾವಿ ಮುಖಂಡ ಶ್ರೀನಿವಾಸ್​ ಎಂಬವರನ್ನು ಹತ್ಯೆ ಮಾಡಲಾಗಿದೆ.

ಶ್ರೀನಿವಾಸ್
ಶ್ರೀನಿವಾಸ್

By ETV Bharat Karnataka Team

Published : Oct 23, 2023, 8:03 PM IST

Updated : Oct 23, 2023, 8:52 PM IST

ಕೋಲಾರ:ದಲಿತ ಮತ್ತು ಕಾಂಗ್ರೆಸ್​ನ ಸ್ಥಳೀಯ ಪ್ರಭಾವಿ ಮುಖಂಡರೊಬ್ಬರನ್ನು ಅಪರಿಚಿತರ ಗುಂಪೊಂದು ಬರ್ಬರವಾಗಿ ಹತ್ಯೆಗೈದ ಘಟನೆ ಇಲ್ಲಿನ ಹೊಗಳಗೆರೆ ರಸ್ತೆಯಲ್ಲಿರುವ ತೋಟದ ಸಮೀಪ ನಡೆದಿದೆ. ಮೃತರನ್ನು ಶ್ರೀನಿವಾಸ್​ ಎಂದು ಗುರುತಿಸಲಾಗಿದೆ. ಕೇವಲ ಮೂರೇ ದಿನಗಳ ಅಂತರದಲ್ಲಿ ಇಬ್ಬರು ಕಾಂಗ್ರೆಸ್​​ ಮುಖಂಡರ ಹತ್ಯೆ ಕಾಂಗ್ರೆಸ್​​ ವಲಯದ ಆತಂಕಕ್ಕೆ ಕಾರಣವಾಗಿದೆ.

ಪ್ರತ್ಯಕ್ಷದರ್ಶಿ ಅಮರ್ ಕೊಲೆ ಬಗ್ಗೆ ಮಾಹಿತಿ ನೀಡಿದ್ದಾರೆ

ಲಾಂಗು ಮತ್ತು ಮಚ್ಚಿನಿಂದ ಶ್ರೀನಿವಾಸ್‌ರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಅಲ್ಲೇ ಇದ್ದ ಶ್ರೀನಿವಾಸ್ ಅವರ ಸಹಾಯಕ ಅಮರ್​ ಹಾಗೂ ಕೃಷ್ಣಪ್ಪ ಎಂಬವರ ಮೇಲೂ ದುಷ್ಕರ್ಮಿಗಳು ಹಲ್ಲೆಗೆ ಮುಂದಾಗಿದ್ದು, ಇಬ್ಬರು ತಪ್ಪಿಸಿಕೊಂಡಿದ್ದಾರೆ. ನಂತರ ಆರು ಜನರಿದ್ದ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.

ಶ್ರೀನಿವಾಸ್​ ಇಂದು ಹಬ್ಬ ಮುಗಿಸಿಕೊಂಡು ಹೊಗಳಗೆರೆ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ರೆಸ್ಟೋರೆಂಟ್​ ಕಾಮಗಾರಿ ವೀಕ್ಷಣೆಗೆಂದು ಹೋಗಿದ್ದರು. ಅಲ್ಲಿ ಜತೆಗಿದ್ದವರೊಂದಿಗೆ ಟೀ ಕುಡಿಯುತ್ತಾ ಕೂತಿದ್ದಾಗ ಪರಿಚಯಸ್ಥ ಕೆಲವರು ಬಂದಿದ್ದಾರೆ. "ಅಂಕಲ್​ ಚೆನ್ನಾಗಿದ್ದೀರಾ?" ಎಂದು ಬಂದು ಕೈ ಕುಲುಕಿ ಕ್ಷಣಾರ್ಧದಲ್ಲೇ ಮುಖಕ್ಕೆ ಸ್ಪ್ರೇ ಹೊಡೆದಿದ್ದಾರೆ. ನಂತರ ಹಿಂದಿನಿಂದ ಮಚ್ಚು ಹಾಗೂ ಲಾಂಗಿನಿಂದ ತಲೆ ಹಾಗೂ ಎದೆಯ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಪಕ್ಕದಲ್ಲಿದ್ದ ಅಮರ್​ ಹಾಗೂ ಕೃಷ್ಣಪ್ಪ ಎಂಬವರ ಕೊಲೆಗೆ ಯತ್ನಿಸಿ, ನಂತರ ಬೈಕ್​ಗಳಲ್ಲಿ ಪರಾರಿಯಾಗಿದ್ದಾರೆ.

ಶ್ರೀನಿವಾಸನ್​ ಅಲಿಯಾಸ್ ಕೌನ್ಸಿಲರ್ ಶ್ರೀನಿವಾಸ್​ ಎಂದೇ ಕರೆಯಲಾಗುತ್ತಿದ್ದ ಶ್ರೀನಿವಾಸ್​ ಶ್ರೀನಿವಾಸಪುರದಲ್ಲಿ ಪ್ರಭಾವಿ ದಲಿತ ಮುಖಂಡ. ಕಳೆದ ನಲವತ್ತು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಪುರಸಭೆ ಸದಸ್ಯರಾಗಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಮತ್ತು ಶ್ರೀನಿವಾಸಪುರ ಎಪಿಎಂಸಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. 2018ರವರೆಗೆ​ ಜೆಡಿಎಸ್ ಪಕ್ಷದಲ್ಲಿದ್ದು ನಂತರ ಕಾಂಗ್ರೆಸ್​ ಸೇರ್ಪಡೆಯಾಗಿದ್ದರು.

ಕೋಲಾರ ಜಿಲ್ಲೆಯಲ್ಲಿ ಕೇವಲ ಮೂರು ದಿನಗಳ ಅಂತರದಲ್ಲಿ ಇಬ್ಬರು ಕಾಂಗ್ರೆಸ್​ ಮುಖಂಡರ ಹತ್ಯೆಯಾಗಿದೆ. ಶನಿವಾರವಷ್ಟೇ ಮಾಲೂರು ತಾಲೂಕು ಜಯಮಂಗಲ ಗ್ರಾಮ ಪಂಚಾಯ್ತಿ ಸದಸ್ಯ ಅನಿಲ್​ ಎಂಬವರ ಕೊಲೆಯಾಗಿತ್ತು.

ಪರಮೇಶ್ವರ್​ ಭೇಟಿ, ಭಾವುಕರಾದ ರಮೇಶ್​ ಕುಮಾರ್​:ಘಟನೆ ಮಾಹಿತಿ ತಿಳಿದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಶ್ರೀನಿವಾಸ್​ ಮೃತದೇಹ ಇರಿಸಿದ್ದ ಕೋಲಾರ ನಗರದ ಹೊರವಲಯದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಕೊಲೆ ಆರೋಪಿಗಳ ಬಂಧನ ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಘೋರ ಕೃತ್ಯವನ್ನು ಖಂಡಿಸುತ್ತೇನೆ, ಆರೋಪಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು. ಅಲ್ಲದೆ, ಮಾಜಿ ಸ್ಪೀಕರ್ ರಮೇಶ್​ ಕುಮಾರ್ ಕೂಡ ಆಸ್ಪತ್ರೆಗೆ ತೆರಳಿ ತಮ್ಮ ಆಪ್ತ ಶ್ರೀನಿವಾಸ್ ಮೃತದೇಹದ ದರ್ಶನ ಪಡೆದರು. ಶ್ರೀನಿವಾಸ್​ ಅವರನ್ನು ಕಳೆದುಕೊಂಡಿದ್ದಕ್ಕೆ ಭಾವುಕರಾದರು.

ಪರಮೇಶ್ವರ್​ ಭೇಟಿ, ಭಾವುಕರಾದ ರಮೇಶ್​ ಕುಮಾರ್

ಕೋಲಾರ ಎಸ್ಪಿ ನಾರಾಯಣ್​ ಪ್ರತಿಕ್ರಿಯಿಸಿದ್ದು, "ಈಗಾಗಲೇ ನಾಲ್ಕು ತಂಡ ರಚಿಸಿದ್ದೇವೆ. ಆರೋಪಿಗಳು ಹಳೆಯ ದ್ವೇಷ ಹಾಗೂ ಕೆಲವು ವೈಯಕ್ತಿಕ ವಿಚಾರಗಳ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕೋಲಾರ: ಕೂಲಿ ಹಣ ಕೇಳಿದ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Last Updated : Oct 23, 2023, 8:52 PM IST

ABOUT THE AUTHOR

...view details